

ಮದ್ದೂರು: ತಾಲೂಕು ಅಗ್ನಿವಂಶ ಕ್ಷತ್ರಿಯಾ ತಿಗಳರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರೀ ಅಗ್ನಿಬನ್ನಿರಾಯಸ್ವಾಮಿಯ 3ನೇ ವರ್ಷದ ಜಯಂತ್ಯುತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ಶ್ರೀ ಉಗ್ರನರಸಿಂಹಸ್ವಾಮಿ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಡೊಳ್ಳು, ಪೂಜಾ ಕುಣಿತ ತಮಟೆ ನಗಾರಿ ಮತ್ತು ಪೂರ್ಣಕುಂಭ ಸ್ವಾಗತ ಮೆರುಗು ನೀಡಿತು. ಅಗ್ನಿ ಬನ್ನಿರಾಯಸ್ವಾಮಿಯ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ಪೇಟೇಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಮದ್ದೂರಮ್ಮ ದೇವಾಲಯದಲ್ಲಿ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಟ್ರಸ್ಟ್‌ನ ತಾಲೂಕು ಅಧ್ಯಕ್ಷ ಎಂ.ಜೆ. ಶಿವಣ್ಣ ಮಾತನಾಡಿ, ತಿಗಳರ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು ಸರಕಾರ ಅಗತ್ಯ ಸೌಲಭ್ಯ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ವಿಶೇಷ ಅನುದಾನ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
ಸರ್ಕಾರದ ವತಿಯಿಂದಲೇ ಅಗ್ನಿಬನ್ನಿರಾಯಸ್ವಾಮಿ ಜಯಂತ್ಯುತ್ಸವ ಆಚರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಜತೆಗೆ ರಾಜಕೀಯವಾಗಿ ಸ್ಥಾನಮಾನ, ಸಮುದಾಯದ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಇತರ ಸೌಲಭ್ಯ ದೊರಕುವಂತಾಗಬೇಕು ಎಂದರು.
ಸಂಘಟನೆ ಗೌರವಾಧ್ಯಕ್ಷ ಎಂ.ವೈ. ಶಿವಣ್ಣ, ಉಪಾಧ್ಯಕ್ಷ ಎಂ.ಟಿ. ಕೃಷ್ಣ, ಕಾರ್ಯದರ್ಶಿ ಎಂ.ಪಿ. ಸ್ವಾಮಿ, ಪದಾಧಿಕಾರಿಗಳಾದ ಎಚ್.ಡಿ. ಸುರೇಶ್, ಮಂಜುನಾಥ್, ಮುತ್ತುರಾಜು, ನರಸಿಂಹಮೂರ್ತಿ, ಶ್ರೀನಿವಾಸ್, ದಾಸಪ್ಪ, ತಿಮ್ಮಯ್ಯ, ಮಧುಸೂದನ್, ಚಿನ್ನಗಿರಿ, ಸತೀಶ್ ಇತರರಿದ್ದರು.