ಅಗ್ನಿಪಥ​ ರದ್ದು ಮಾಡಲು ಪಟ್ಟು: ತುಮಕೂರಿನಲ್ಲಿ ಕಾಂಗ್ರೆಸ್​ ಕಾರ್ಯಕರ್ತರಿಂದ ಪ್ರತಿಭಟನೆ

2
Published on

ತುಮಕೂರು: ಅಗ್ನಿಪಥ​​ ಯೋಜನೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್​ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಆರ್​.ರಾಮಕೃಷ್ಣ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್​ ಕಾರ್ಯಕರ್ತರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಅಗ್ನಿಪಥ​​ ಯೋಜನೆಯ ವಿರುದ್ಧ ಧಿಕ್ಕಾರ ಕೂಗಿ, ಅಗ್ನಿಪಥ್​ ಯೋಜನೆ ಕೈಬಿಡುವಂತೆ ಆಗ್ರಹಿಸಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಆರ್​.ರಾಮಕೃಷ್ಣ, ಬಿಜೆಪಿಯವರಿಗೆ ಉನ್ನತ ಹುದ್ದೆಗಳು ಬೇಕು, ಸವಲತ್ತುಗಳು ಬೇಕು. ಆದರೆ, ಗಡಿಯಲ್ಲಿ ದೇಶ ಕಾಯುವ ಸೈನಿಕರನ್ನು 4 ವರ್ಷ ಕೆಲಸ ಮಾಡಿ ಮನೆಗೆ ಹೋಗಿ ಎಂದರೆ ಏನರ್ಥ. ಇವರು ಬೇಕಾದರೆ 4 ವರ್ಷ ಕೆಲಸ ಮಾಡಿ ಮನೆಗೆ ಹೋಗಲಿ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯವರಿಗೆ ದೇಶದ ಜನತೆ ತಕ್ಕಪಾಠ ಕಲಿಸಬೇಕು ಎಂದು ಗುಡುಗಿದರು.

ದೇಶದ ಹಿತದೃಷ್ಟಿ, ರಕ್ಷಣಾ ವ್ಯವಸ್ಥೆಗೆ ನೈತಿಕ ಬಲ ತುಂಬುವ ನಿಟ್ಟಿನಲ್ಲಿ ಕಾಂಗ್ರೆಸ್​ ಸೈನಿಕರ ಪರವಾಗಿ ದೇಶಾದ್ಯಂತ ಹೋರಾಟ ಮಾಡುತ್ತಿದೆ. ಕೂಡಲೇ ಅಗ್ನಿಪಥ​​ ಯೋಜನೆಯ ಆದೇಶವನ್ನು ಹಿಂಪಡೆಯಲೇಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯೋಜನೆ ಹಿಂಪಡೆಯಿರಿ: ಅಗ್ನಿಪಥ​ ಯೋಜನೆಯನ್ನು ಬಿಜೆಪಿ ಕಾರ್ಯಾಲಯದಲ್ಲೇ ಇಟ್ಟುಕೊಳ್ಳಬೇಕು. ದೇಶದ ನಾಗರಿಕರು ಈ ಯೋಜನೆಯನ್ನು ಖಂಡಿಸುತ್ತಿದ್ದಾರೆ. ಈ ಭಾಗದಲ್ಲಿ ಅದಕ್ಕೆ ಅವಕಾಶ ಕಲ್ಪಿಸಲು ಬಿಡುವುದಿಲ್ಲ. ರೈತ ವಿರೋಧಿ ಕಾಯ್ದೆ ವಾಪಸ್​ ಪಡೆದಂತೆ ಈ ಯೋಜನೆಯನ್ನು ಹಿಂಪಡೆಯಬೇಕು ಎಂದು ಮುರಳೀಧರ ಹಾಲಪ್ಪ ಒತ್ತಾಯಿಸಿದರು.

ರಕ್ಷಣಾ ವ್ಯವಸ್ಥೆ ಕುಸಿದು ಹೋಗಿದೆ. ಚೀನಾದವರು 20 ಸಾವಿರ ಚದರ ಕಿ.ಮೀ. ಭೂಮಿಯನ್ನು ಆಕ್ರಮಣ ಮಾಡಿಕೊಂಡಿದ್ದಾರೆ. ರಕ್ಷಣಾ ವ್ಯವಸ್ಥೆ ದಿನೇದಿನೆ ಗಟ್ಟಿಯಾಗುವ ಬದಲು ತಾತ್ಕಾಲಿಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಸಲುವಾಗಿ ಅಗ್ನಿಪಥ​​ ಯೋಜನೆ ಜಾರಿಗೆ ತಂದಿದ್ದಾರೆ. ಜಿಲ್ಲೆಯ 1700ಕ್ಕೂ ಹೆಚ್ಚು ಜನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೇನೆಯಲ್ಲಿ ತಾತ್ಕಾಲಿಕ ಸೇವೆ ಬೇಡ, ಕಾಯಂ ಸೇವೆ ಬೇಕು. ಆದ್ದರಿಂದ ಈ ಅಗ್ನಿಪಥ​​ ಯೋಜನೆ ರದ್ದುಪಡಿಸಲೇಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net