

ಸಾಗರ: ಅಗ್ನಿಪಥ ಯುವಜನರಲ್ಲಿ ಸೇನೆ ಸೇರುವ ಮೂಲಕ ದೇಶ ಸೇವೆ ಮಾಡುವ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು.
ಸಾಗರ ವ್ಯಾಯಾಮ ಶಾಲೆ ಅಗ್ನಿಪಥ ಆಕಾಂಕ್ಷಾರ್ಥಿಗಳಿಗಾಗಿ ಆಯೋಜಿಸಿರುವ ಪೂರ್ವಭಾವಿ ತರಬೇತಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಸೇನೆಗೆ ಸೇರುವುದರಿಂದ ಜೀವನ ಶಿಸ್ತುಬದ್ಧವಾಗಲಿದೆ. ಜತೆಗೆ ರಾಷ್ಟ್ರಕಟ್ಟುವ ಪ್ರಜ್ಞೆ ಜಾಗೃತವಾಗುತ್ತದೆ ಎಂದರು.
ದೇಶಕ್ಕೆ ಅನ್ನ ಕೊಡುವ ರೈತ ಮತ್ತು ಗಡಿ ಕಾಯುವ ಸೈನಿಕರು ನಮ್ಮ ಎರಡು ಕಣ್ಣುಗಳಿದ್ದಂತೆ. ಇಬ್ಬರನ್ನೂ ನಾವು ಜೋಪಾನದಿಂದ ನೋಡಿಕೊಳ್ಳಬೇಕು. ರೈತರು ನಮಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದರೆ, ಸೈನಿಕರು ದೇಶ ಕಾಯುತ್ತಿದ್ದಾರೆ. ರೈತರು, ರೈತ ಕೂಲಿಕಾರ್ಮಿಕರ ಮಕ್ಕಳು ಹೆಚ್ಚಾಗಿ ಸೈನ್ಯಕ್ಕೆ ಸೇರುತ್ತಿದ್ದಾರೆ. ಸೈನ್ಯಕ್ಕೆ ಸೇರುವವರಿಗೆ ಪೂರ್ವಭಾವಿ ತರಬೇತಿ ನೀಡಲು ರಾಜ್ಯ ಸರ್ಕಾರ ಸಹ ಯೋಜನೆ ರೂಪಿಸಿದೆ. ಅದನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಈ ಬಾರಿ ಸದನದಲ್ಲಿ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಈಚೆಗೆ ಆನಂದಪುರದ ಮುರುಘಾಮಠದಲ್ಲಿ ಆಯೋಜಿಸಲಾಗಿದ್ದ ಅಗ್ನಿಪಥ ಶಿಬಿರದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ಉತ್ತಮ ತರಬೇತಿ ನೀಡಲಾಗಿತ್ತು. ಸಾಗರದಲ್ಲಿಯೂ ಅದೇ ಮಾದರಿಯಲ್ಲಿ ಸಾಗರ ವ್ಯಾಯಾಮ ಶಾಲೆ ತರಬೇತಿ ನೀಡಲು ಮುಂದಾಗಿರುವುದು ಸ್ವಾಗತಾರ್ಹ ಸಂಗತಿ. ಪೂರ್ವಭಾವಿ ತರಬೇತಿ ನಂತರ ಹೆಚ್ಚಿನ ತರಬೇತಿ ನೀಡಲು ನಿವೃತ್ತ ಯೋಧರನ್ನು ಬಳಸಿಕೊಳ್ಳುವುದು ಸೂಕ್ತ. ಅದಕ್ಕೆ ತಗಲುವ ವೆಚ್ಚವನ್ನು ನಾನು ಭರಿಸುತ್ತೇನೆ. ಪ್ರತಿವರ್ಷ ಸೈನ್ಯಕ್ಕೆ ಸೇರುವವರಿಗೆ ತರಬೇತಿ ನೀಡಲು ಹಮ್ಮಿಕೊಳ್ಳುವ ತರಬೇತಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವ್ಯಾಯಾಮ ಶಾಲೆ ಅಧ್ಯಕ್ಷ ಯು.ಕೆ.ವಿಜಯಕುಮಾರ್ ಮಾತನಾಡಿ, ಹಿಂದಿನ ಬಾರಿ ನಮ್ಮ ವ್ಯಾಯಾಮ ಶಾಲೆಯಿಂದ ಪೊಲೀಸ್ ಇಲಾಖೆಗೆ ಸೇರುವವರಿಗೆ ತರಬೇತಿ ನೀಡಲಾಗಿತ್ತು. ತರಬೇತಿ ಪಡೆದವರ ಪೈಕಿ 20ಕ್ಕೂ ಹೆಚ್ಚು ಜನರು ಹುದ್ದೆ ಪಡೆದಿದ್ದಾರೆ. ಅಗ್ನಿಪಥಗೆ ಸೇರಲು ಯುವಕರು ಉತ್ಸಾಹ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ತರಬೇತಿಯಲ್ಲಿ 60ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿರುವುದು ಆಶಾದಾಯಕ ಸಂಗತಿ ಎಂದು ಹೇಳಿದರು.