ಅಗ್ನಿಪಥ ಕೈಬಿಡಿ: ಎಸ್.ಜಿ.ಒಂಬತ್ಕೆರೆ

DSC_9359
Published on

ಮೈಸೂರು: ಭಾರತೀಯ ಸೇನೆಯ ಬಲ ಮತ್ತು ಶಕ್ತಿಯನ್ನು ಕುಗ್ಗಿಸುವ ಅಗ್ನಿಪಥ ಯೋಜನೆಯನ್ನು ಕೈಬಿಡಬೇಕು ಎಂದು ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ ಒತ್ತಾಯಿಸಿದರು.
ಕ್ವಿಟ್ ಇಂಡಿಯಾ ಚಳವಳಿಯ ದಿನಾಚರಣೆಯ ಅಂಗವಾಗಿ ಸಂಯುಕ್ತ ಹೋರಾಟ- ಕರ್ನಾಟಕದ ವತಿಯಿಂದ ಜೆಎಲ್‌ಬಿ ರಸ್ತೆಯಲ್ಲಿರುವ ಇಂಜಿನಿಯರ್ಸ್‌ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜೈ ಜವಾನ್-ಜೈ ಕಿಸಾನ್ ಸಮಾವೇಶ’ ಮತ್ತು ‘ಅಗ್ನಿಪಥ ಯೋಜನೆ’ ಕುರಿತ ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಧರ ಶಕ್ತಿ ಕುಂದಿದರೆ ಪಾಕಿಸ್ತಾನ, ಚೀನಾ ರಾಷ್ಟ್ರಗಳನ್ನು ನಮ್ಮ ಸೈನಿಕರು ಯಾವ ರೀತಿ ಎದುರಿಸುತ್ತಾರೆ ಎಂದು ಪ್ರಶ್ನಿಸಿದರು.
ಭಾರತೀಯ ಸೇನೆಯಲ್ಲಿ 13 ಲಕ್ಷ ಯೋಧರಿದ್ದಾರೆ. ಇವರ ಪೈಕಿ ಶೇ.80 ಆರ್ಮಿ, ವಾಯು, ನೌಕಾಸೇನೆಯಲ್ಲಿ ಹಾಗೂ ಗಡಿಯಲ್ಲಿ ಶೇ.20 ಸೈನಿಕರಿದ್ದಾರೆ. ಇವರು ದೇಶದ ರಕ್ಷಣೆ, ಭದ್ರತೆಗಾಗಿ ರಕ್ತ, ಜೀವ ಕೊಟ್ಟು ದೇಶವನ್ನು ಕಾಯುತ್ತಾರೆ. ಇಲ್ಲಿ ಯಾವ, ಜಾತಿ, ಧರ್ಮ, ಭಾಷೆ, ಪ್ರದೇಶ, ರಾಜ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಒಂದೇ ಎಂದರು.
ಪ್ರತಿ ವರ್ಷ ಸೇನೆಯಲ್ಲಿ 60 ಸಾವಿರ ಜವಾನರು ನಿವೃತ್ತರಾಗುತ್ತಾರೆ. ಕರೊನಾ ಸಾಂಕ್ರಾಮಿಕ ರೋಗದಿಂದ 2 ವರ್ಷಗಳಿಂದ ಸೇನೆಯಲ್ಲಿ ನೇಮಕಾತಿ ನಡೆಯಲಿಲ್ಲ. ಹಾಗಾಗಿ ಸೇನೆಯಲ್ಲಿ 1.2 ಲಕ್ಷ ಸೈನಿಕರ ಕಡಿಮೆ ಇದೆ. ಈ ವ್ಯತ್ಯಾಸವನ್ನು ಸರಿದೂಗಿಸಲು ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿ 17ರಿಂದ-21 ವರ್ಷದೊಳಗಿನ ಯುವಕರು ಅಗ್ನಿವೀರ ರ‌್ಯಾಂಕ್ ಪಡೆದು ಸೇನೆಯಲ್ಲಿ ಸೇರುತ್ತಾರೆ. 4 ವರ್ಷ ಸೇವೆ ಮಾಡಿದ ಮೇಲೆ 45 ಸಾವಿರ ಅಗ್ನಿವೀರರು ವಾಪಸ್ ಬರುತ್ತಾರೆ. ಬರುವಾಗ 10 ಲಕ್ಷ ರೂ. ದುಡ್ಡು ಪಡೆಯುತ್ತಾರೆ. ಗರಿಷ್ಠ ಶೇ.25 ಅಗ್ನಿವೀರರು ಯೋಧರಾಗಿ ಸೇರಿಕೊಳ್ಳಬಹುದು ಎಂದು ವಿಶ್ಲೇಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net