

ಮೈಸೂರು: ಅಗ್ನಿ ಬನ್ನಿರಾಯ ಜನಾಂಗ ಸುಮಾರು 14 ಪಂಗಡಗಳನ್ನು ಒಳಗೊಂಡಿರುವ ಒಕ್ಕೂಟದ ಸಮಾಜ. ಇವರೆಲ್ಲರೂ ಅಗ್ನಿಯ ಆರಾಧಕರು. ಅಗ್ನಿಯನ್ನೇ ಮೂಲವಾಗಿ ನಂಬಿಕೊಂಡು ಆರಾಧಿಸಿಕೊಂಡು ಬರುತ್ತಿರುವವರು ಎಂದು ಸಂಶೋಧಕ ಕೆ.ಆರ್.ಮಧುಸೂದನ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಿರುರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಅಗ್ನಿಬನ್ನಿರಾಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಭಾಗದಲ್ಲಿ ಅಗ್ನಿ ಬನ್ನಿರಾಯ ಎಂದು ಕರೆಯುತ್ತಾರೆ. ಅದೇ ತಮಿಳುನಾಡು ಭಾಗಗಳಲ್ಲಿ ವನ್ನಿ ಮಹಾರಾಜ, ಆಂಧ್ರಪ್ರದೇಶದಲ್ಲೂ ವನ್ನಿ ಮಹಾರಾಜ ಎಂದು ಕರೆಯುತ್ತಾರೆ ಎಂದರು.
ಪ್ರಾಚೀನ ಇತಿಹಾಸ ಪುಟಗಳಲ್ಲಿ ಶಾಸನಬದ್ಧವಾಗಿ ನಾವು ಗಮನಿಸಿದಾಗ ಬನ್ನೇರುಘಟ್ಟದಲ್ಲಿ ಚೋಳರು ಬಂದಂತಹ ಸಂದರ್ಭದಲ್ಲಿ ವನ್ನಿ ಘಟ್ಟ ಎಂದು ಉಲ್ಲೇಖವಾಗುತ್ತದೆ. ಅದೇ ನಮ್ಮ ಕನ್ನಡ ಶಾಸನಗಳಲ್ಲಿ ಬನ್ನೇರುಘಟ್ಟ ಎಂದು ಉಲ್ಲೇಖವಾಗುತ್ತದೆ. ಮೈಸೂರಿನ ಬನ್ನೂರು ಬಗ್ಗೆ ತಮಿಳು ಶಾಸನದಲ್ಲಿ ವನ್ನಿ ಊರು ಎಂದು ಉಲ್ಲೇಖಿಸಿದ್ದಾರೆ. ಕನ್ನಡ ಶಾಸನದಲ್ಲಿ ಬನ್ನಿ ಊರು ಎಂದು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.
ಅಗ್ನಿ ಒಬ್ಬ ಹಿಂದು ದೇವತೆ, ವೈದಿಕ ದೇವತೆಗಳ ಅತ್ಯಂತ ಪ್ರಮುಖರ ಪೈಕಿ ಒಬ್ಬನು. ಅವನು ಬೆಂಕಿಯ ದೇವರು ಮತ್ತು ಬಲಿಗಳ ಸ್ವೀಕಾರಕ. ಅಗ್ನಿಗೆ ಅರ್ಪಿಸಲಾದ ಬಲಿಗಳು ದೇವತೆಗಳಿಗೆ ಹೋಗುತ್ತವೆ. ಏಕೆಂದರೆ ಅಗ್ನಿಯು ಇತರ ದೇವತೆಗಳಿಂದ ಮತ್ತು ಇತರ ದೇವತೆಗಳಿಗೆ ಸಂದೇಶವಾಹಕ ಎಂದು ತಿಳಿಸಿದರು.
ಅಗ್ನಿಯ ಉಪಯೋಗದಿಂದ ಮಾನವ ಸಮಾಜ ತನ್ನ ಸುತ್ತಲಿನ ಪ್ರಾಣಿವರ್ಗದಿಂದ ಭಿನ್ನವಾಗಿದೆ. ಅದನ್ನು ಉಪಯೋಗಿಸದ ಜನರಿಲ್ಲ. ಅನೂಹ್ಯವಾದ ಅದರ ಶಕ್ತಿ ಮತ್ತು ಅಗತ್ಯತೆಗಳು ಕಾರಣವಾಗಿ ಅದಕ್ಕೆ ಪವಿತ್ರತೆಯ ದೇವಪಟ್ಟ ಲಭಿಸಿದೆ ಎಂದು ಹೇಳಿದರು.
ಅಗ್ನಿ ಬನ್ನಿ ರಾಯರನ್ನು ವಿದೇಶದವರು. ಅವರು ಈ ದೇಶದವರಲ್ಲ ಎಂದು ಹೇಳುತ್ತಿದ್ದರು. ಆದರೆ ಒಂದಷ್ಟು ಇತಿಹಾಸಕಾರರು ಇವರ ಮೂಲ ದಾಖಲೆಗಳನ್ನು ಹುಡುಕಿ ಇವರು ಎಲ್ಲಿಂದಲೋ ಬಂದಿರುವವರಲ್ಲ. ಇವರು ನಮ್ಮ ಮೂಲ ನಿವಾಸಿಗಳೇ. ಶಾಸನದಲ್ಲೂ ಅವರ ಮೂಲ ಇದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಅಗ್ನಿಬನ್ನಿರಾಯ ಸಮುದಾಯದವರು ಯಾರೂ ಮಣ್ಣನ್ನು ನಂಬಿ ಕೆಟ್ಟಿಲ್ಲ, ವ್ಯವಸಾಯವನ್ನೂ ನಂಬಿ ಕೆಟ್ಟಿಲ್ಲ, ಕಷ್ಟಗಳು ಬಂದಿರಬಹುದು. ಆದರೂ ಈ ಜಗತ್ತು ಪ್ರೀತಿಸುವಂತಹ ಅಗ್ನಿ ಸಮುದಾಯರಾಗಿಯೇ ಉತ್ತಮವಾಗಿ ಬೆಳೆಯುತ್ತಾರೆ ಎಂದರು.
ಸಂಸ್ಕೃತದಲ್ಲಿ ಬನ್ನಿಯನ್ನು ವಹನಿ ಎಂದು ಕರೆಯುತ್ತಾರೆ. ಸಂಸ್ಕೃತದ ತದ್ಭವ ಅರ್ಥವಾಗಿದೆ. ಅಗ್ನಿ ಕುಲದಿಂದಲೇ ಅದರ ಸಂಕೇತವಾಗಿದೆ. ಪಾಂಡವರು ವನವಾಸಕ್ಕೆ ಹೋದಾಗ ಬನ್ನಿ ಮರದ ಕೆಳಗೆ ಆಯುಧಗಳನ್ನು ಬಚ್ಚಿಟ್ಟು ಹೋಗುತ್ತಿದ್ದರು. ಪಾಂಡವರು ಎಲ್ಲವನ್ನೂ ಕಳೆದುಕೊಂಡು ಇದ್ದಾಗ ಹೇಗಾದರೂ ಮಾಡಿ ಇವರನ್ನು ಸೋಲಿಸಬೇಕು ಎಂದು ಬೆಂಕಿಯನ್ನು ಪೂರ್ತಿಯಾಗಿ ಆರಿರುವ ಸಂದರ್ಭದಲ್ಲಿ ಆಗ ಅದನ್ನು ಅಗ್ನಿ ಪುತ್ರಿಯೆ ಮತ್ತೊಮ್ಮೆ ಊದಿ ಬೆಂಕಿಯನ್ನು ಹಚ್ಚುತ್ತಾಳೆ.
ಅವರ ಪೌರುಷವನ್ನು ಮತ್ತೆ ಕಿಡಿ ಹಾಕಿ ತೆಗೆಯುತ್ತಾಳೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಸಮಿತಿಯ ಪಾಲ್ನಳ್ಳಿಯ ಮಾದವಣ್ಣ, ಶಿವಣ್ಣ, ಪುಟ್ಟಸ್ವಾಮಿ ಇತರರು ಇದ್ದರು.