ಅಗಸಬಾಳ, ತಾರನಾಳ ಕೆರೆಗೆ ನೀರು ಯಾವಾಗ ?

When will the water in Agasabala Tarana lake_
ಮುದ್ದೇಬಿಹಾಳ ತಾಲೂಕಿನ ತಾರನಾಳ ಗ್ರಾಮದ ಕೆರೆ.
Published on

ಢವಳಗಿ: ರಾಜ್ಯ ಸರ್ಕಾರದಿಂದ ಪ್ರತಿಯೊಂದು ತಾಲೂಕಿನಲ್ಲಿರುವ ಎಲ್ಲ ಕೆರೆ ತುಂಬುವ ಮಹತ್ವದ ಯೋಜನೆಯನ್ನು ಸರ್ಕಾರ 2019-20ರಲ್ಲಿ ಕೈಗೆತ್ತಿಕೊಂಡಿದೆ. ಆದರೆ ಮುದ್ದೇಬಿಹಾಳ ತಾಲೂಕಿನಲ್ಲಿರುವ ಅಗಸಬಾಳ ಮತ್ತು ತಾರನಾಳ ಕೆರೆಗಳು ಮಾತ್ರ ನಾಲ್ಕು ವರ್ಷವಾದರೂ ಇನ್ನೂ ನೀರು ಕಂಡಿಲ್ಲ.

ಮುದ್ದೇಬಿಹಾಳ ತಾಲೂಕಿನ ಅಗಸಬಾಳ ಗ್ರಾಮದಲ್ಲಿರುವ ಕೆರೆಯು ಅಂದಾಜು 70 ಎಕರೆ ವಿಸ್ತೀರ್ಣ ಹೊಂದಿದೆ. ತಾರನಾಳ ಗ್ರಾಮದಲ್ಲಿರುವ ಕೆರೆಯ ವಿಸ್ತೀರ್ಣ ಅಂದಾಜು 50 ಎಕರೆ ವಿಸ್ತೀರ್ಣ ಹೊಂದಿದೆ. ಹಿಂದಿನ ನಮ್ಮ ಪೂರ್ವಜರು ಇದೇ ಕೆರೆಯ ನೀರನ್ನು ಕುಡಿಯಲು ಮತ್ತು ದನಕರುಗಳಿಗೆ ಕುಡಿಯಲು ಕುಡಿಸಲು ಬಳಸುತ್ತಿದ್ದರು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಮಳೆಗಾಲ ಕಡಿಮೆಯಾಗಿದ್ದರಿಂದ ಅಂತರ್ಜಲ ಮಟ್ಟ ಕುಸಿದು ಕುಡಿಯಲು ನೀರು ಸಿಗದಾಗಿದೆ.

2020-21ನೇ ಸಾಲಿನಲ್ಲಿ ಮುಳವಾಡ ಏತ ನೀರಾವರಿಯ ಸಂಕನಾಳ ಶಾಖಾ ಕಾಲುವೆಯು ಆರಂಭವಾಗಿ ಸುಮಾರು ಮೂರು ವರ್ಷವಾದರೂ ಕಾಮಗಾರಿಯೂ ಇನ್ನೂ ಪೂರ್ಣಗೊಂಡಿಲ್ಲ. ಅಪೂರ್ಣ ಕಾಮಗಾರಿಯಾಗಿ ಕೆರೆ ತುಂಬುವ ಯೋಜನೆ ನೆನೆಗುದಿಗೆ ಬಿದ್ದಿದೆ. ಮುಳವಾಡ ಏತ ನೀರಾವರಿಯ ಹೂವಿನಹಿಪ್ಪರಗಿಯ ನಾಲ್ಕನೇ ಶಾಖಾ ಕಾಲುವೆಯು ಆರಂಭವಾಗಿ ಮೂರ‌್ನಾಲ್ಕು ವರ್ಷವಾದರೂ ಇನ್ನೂ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ಈ ಭಾಗದ ರೈತರು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಕೆರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೆರೆ ತುಂಬುವ ಯೋಜನೆಯಿಂದ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರಿಗೆ ಕುಡಿಯಲು ನೀರಿನ ಸಮಸ್ಯೆಯಿಂದ ಪಾರಾಗಬಹುದು. ರೈತರ ಬಾವಿ ಮತ್ತು ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ವ್ಯವಸಾಯಕ್ಕೂ ಅನುಕೂಲವಾಗುತ್ತದೆ. ಅಷ್ಟೇ ಅಲ್ಲದೆ ದನಕರು ಮತ್ತು ಕುರಿಮರಿಗಳಿಗೆ ಕುಡಿಯಲು ಸಿಕ್ಕಂತಾಗುತ್ತಿದೆ ಎಂದು ಗ್ರಾಮಸ್ಥರಾದ ಸಂಗಣ್ಣ ಕೋಣನವರ, ಎಂ.ಬಿ. ಮುದ್ದೇಬಿಹಾಳ, ಪ್ರಭು ಹೂಗಾರ, ಅಡಿವೆಪ್ಪ ಬೀರಗೊಂಡ, ದುಂಡಪ್ಪ ಅರಸುಣಗಿ, ಮಾಹಂತಗೌಡ ಕಾಶೀನಕುಂಟಿ, ಬಾಲಚಂದ್ರ ಬಡಿಗೇರ ಮನವಿ ಮಾಡಿದ್ದಾರೆ. ಶೀಘ್ರ ಕೆರೆ ತುಂಬುವ ಯೋಜನೆಯ ಕಾಲುವೆ ಕಾಮಗಾರಿ ಮುಗಿಸಲು ಕೆಬಿಜೆಎನ್‌ಎಲ್ ಇಂಜಿನಿಯರ್ ಜಗದೀಶ ಹೊನ್ನಕಸ್ತೂರಿ ಅವರಿಗೆ ದೂರವಾಣಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.

ವಿಜಯಪುರ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಕೆರೆ ತುಂಬುವ ಯೋಜನೆ ಮಾಡಿದ್ದಾರೆ. ನದಿಯಿಂದ ದೂರವಿರುವ ಪ್ರದೇಶಗಳಲ್ಲಿ ಮುದ್ದೇಬಿಹಾಳ ಮತ್ತು ಬಾಗೇವಾಡಿ ತಾಲೂಕಿನ ಹಲವಾರು ಹಳ್ಳಿಗಳಿಗೆ ಕೆರೆ ತುಂಬುವ ಯೋಜನೆ ಸರಳಾಗಿದ್ದರೂ ಸಹ ರಾಜಕಾರಣಿಗಳ ಮತ್ತು ಅಧಿಕಾರಿಗಳ ಇಚ್ಛಾಸಕ್ತಿ ಕೊರತೆಯಿಂದ ವಿಳಂಬವಾಗಿದೆ. ವಿಳಂಬವಾದ ಕಾಮಗಾರಿಯನ್ನು ತಕ್ಷಣ ಮಾಡಬೇಕು. ಬರಗಾಲ ಬಂದಾಗ ಜನರಿಗೆ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗುತ್ತಿದೆ. ಹೀಗಾಗಿ ಕೂಡಲೇ ಸರ್ಕಾರ ಎಲ್ಲ ಕರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಆದ್ಯತೆ ನೀಡಬೇಕು.
ಸಿದ್ದನಗೌಡ ಪಾಟೀಲ, ರೈತಪರ ಹೋರಾಟಗಾರ.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net