

ದೇವದುರ್ಗ: ಅಂಗವಿಕಲರ ಪೋಷಣಾ ಭತ್ಯೆ ಮಾಸಾಶನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಪಟ್ಟಣದ ಮಿನಿ ವಿಧಾನಸೌಧ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿತು.
ರಾಜ್ಯದಲ್ಲಿ ಅಂಗವಿಕಲರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಸರ್ಕಾರದ ಯೋಜನೆಗಳು ಹಾಗೂ ಅನುದಾನ ಸಮರ್ಪಕವಾಗಿ ಬಳಕೆ ಆಗದೆ ಸಮಸ್ಯೆ ಎದುರಿಸುತ್ತಿದ್ದಾರೆ. 2016ರಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ಜಾರಿಗೊಳಿಸಿದ್ದು, ಇದರ ಪ್ರಕಾರ ಅಂಗವಿಕಲರಿಗೆ ಸಮರ್ಪಕ ಸೌಲಭ್ಯ ಹಾಗೂ ಅವಕಾಶ ಸಿಗುತ್ತಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ದೂರಿದರು.
ಕೂಡಲೇ ಕೇಂದ್ರ-ರಾಜ್ಯ ಸರ್ಕಾರ ಜತೆಗೂಡಿ ಪೋಷಣಾ ಭತ್ಯೆ ಮಾಸಾಶನ 10 ಸಾವಿರ ರೂ.ಗೆ ಹೆಚ್ಚಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳ ಜತೆ ಅಂಗವಿಕಲರ ಸಭೆ ಕರೆದು ಕುಂದುಕೊರತೆ ಆಲಿಸಬೇಕು. ಮಾಸಾಶನವನ್ನು ನಿಗದಿತ ಸಮಯದಲ್ಲಿ ನೀಡಬೇಕು. ಗ್ರಾಪಂ-ತಾಪಂ ಹಾಗೂ ಜಿಪಂನಲ್ಲಿ ಅಂಗವಿಕಲರಿಗೆ ಶೇ.5 ಅನುದಾನ ಮೀಸಲಿಟ್ಟು, ಕೆಡಿಪಿ ಸಭೆಯಲ್ಲಿ ಅನುದಾನ ಬಳಕೆ ಬಗ್ಗೆ ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಜೆಪಿ ವೃತ್ತದಿಂದ ವಿವಿಧ ಬಡಾವಣೆ ಮೂಲಕ ಮಿನಿವಿಧಾನಸೌಧವರೆಗೆ ರ‌್ಯಾಲಿ ನಡೆಸಿದರು.
ರಾಜ್ಯ ಉಪಾಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ, ಜಿಲ್ಲಾಧ್ಯಕ್ಷ ಹೊನ್ನಪ್ಪ ಗೂಳಪ್ಪನವರ್, ತಾಲೂಕು ಅಧ್ಯಕ್ಷ ವೆಂಕೋಬ ನಾಯಕ, ಪ್ರಮುಖರಾದ ಮಾಳಪ್ಪ ಜಾಗಟಗಲ್, ಡಾಕೋಜಿ, ಲೋಕಪ್ಪ ಜಾದವ್, ಗಿರಿಯಪ್ಪ ಪೂಜಾರಿ, ಬಸನಗೌಡ ದೇಸಾಯಿ, ಲಿಂಗಣ್ಣ ಮಕಾಶಿ, ಹನುಮಂತ ಬುಂಕಲದೊಡ್ಡಿ, ರವಿಕುಮಾರ, ಮಲ್ಲಿಕಾರ್ಜುನ, ಭೀಮರಾಯ, ರೇಣುಕಾ, ಹನುಮಂತಿ, ವಿರೂಪಾಕ್ಷಿ, ಗಂಗಾಧರ, ಚನ್ನಪ್ಪ ಇತರರಿದ್ದರು.