

ರಾಮದುರ್ಗ: ನಾಡಿನಲ್ಲಿ ತಮ್ಮ ವ್ಯಕ್ತಿತ್ವ, ಸಮಾಜ ಸೇವೆಯ ಮೂಲಕ ಸಾಧನೆ ಮಾಡಿದ ಮಹಾನ್ ಚೇತನಗಳನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ ಎಂದು ಫಲಹಾರೇಶ್ವರ ಪ.ಪೂ ಮಹಾವಿದ್ಯಾಲಯದ ಉಪನ್ಯಾಸಕ ಪಿ.ಎಲ್. ಮಿಸಾಳೆ ಹೇಳಿದರು.
ಪಟ್ಟಣದ ಶ್ರೀಗುರು ಪುಟ್ಟರಾಜ ನಾದಸ್ವರ ಸಂಗೀತ ಪಾಠಶಾಲೆಯ ಕಲಾವಿದರ ಬಳಗದಿಂದ ಶಿವಮೂರ್ತೆಶ್ವರ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಗಲಿದ ಇಬ್ರಾಹಿಂ ಸುತಾರ ಹಾಗೂ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಧಕರ ಇತಿಹಾಸ, ಅವರು ನಡೆದು ಬಂದ ದಾರಿಯ ಕುರಿತು ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಲ್ಲಿ ಬದುಕು ಸುಂದರಗೊಳ್ಳುವ ಜತೆಗೆ ಅವರಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಬಸವ ತತ್ತ್ವದ ಶರಣ ಸಾಹಿತಿ ಈಶ್ವರ ಮಂಟೂರ, ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ, ಕನ್ನಡ ಕಬೀರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಹಾಗೂ ಗಾನ ಗಂಧರ್ವ ಲತಾ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಶ್ರೀಗುರು ಪುಟ್ಟರಾಜ ನಾದಸ್ವರ ಸಂಗೀತ ಪಾಠ ಶಾಲೆಯ ಸಂಸ್ಥಾಪಕ ಪಿ.ಎಂ. ಹೂಗಾರ ಲತಾ ಮಂಗೇಶ್ಕರ್ ಅವರ ಜನಪ್ರೀಯ ಹಾಡುಗಳನ್ನು ಹಾಡಿ ಗಮನ ಸೆಳೆದರು.
ಮಹಾಂತೇಶ ಹಿರೇಮಠ ಅವರು ಇಬ್ರಾಹಿಂ ಸುತಾರ ಅವರ ಕುರಿತು ಕವಿತೆ ರಚಿಸಿ ಹಾಡಿದರು. ಮಹೇಶ ಮೋಟೆ, ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಅವರ ನೆಚ್ಚಿನ ಶಿಶುನಾಳ ಶರೀಫ್‌ರ ತತ್ತ್ವ ಪದಗಳನ್ನು ಹಾಡಿದರು. ಕಲಾವಿದರಾದ ಕೃಷ್ಣ ಕೊಳದೂರ, ಶಶಿಕಾಂತ ಕಂಬಣ್ಣವರ, ಸುರೇಶ ಪಾಟೀಲ, ಮಂಜುನಾಥ ರಾಯಬಾಗ, ಜಾನಪದ ಕಲಾವಿದೆ ಶಂಕ್ರಮ್ಮ ಮುಗಳಿ, ಯುವ ಗಾಯಕಿ ಸುಧಾ ಅಗಾಸಿ, ಮನೋಹರ ಕಲ್ಯಾಣಿ, ತಿಪ್ಪಯ್ಯ ಹಿರೇಮಠ ಅವರು ಸಂಗೀತ ತತ್ವ ಪದಗಳನ್ನು ಪ್ರಸ್ತುತ ಪಡಿಸಿದರು. ಎಸ್.ಎಂ. ಬಡಿಗೇರ ನಿರೂಪಿಸಿದರು. ಮಹೇಶ ಮೋಟೆ ವಂದಿಸಿದರು.