ಅಗತ್ಯವುಳ್ಳವರಿಗೆ ಗ್ಯಾರಂಟಿಯಿಲ್ಲದೇ ಸಾಲ ನೀಡಿ

17kmr1
ಕಮಲನಗರದ ದಾನಾ ಕಾಂಪ್ಲೆಕ್ಸ್ನಲ್ಲಿ ಮಂಗಳವಾರ ಡಾ.ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಸಂಘದ ನೂತನ ಶಾಖೆಯನ್ನು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಡಿ.ಕೆ.ಸಿದ್ರಾಮ, ಸಿಇಒ ಗಣಪತಿ ಬಾವಗೆ, ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ, ಜೈರಾಜ ಖಂಡ್ರೆ, ರಾಜಶೇಖರ ಅಷ್ಟೂರೆ, ಶರದ ಸಿರ್ಸೆ, ರೇಖಾ ಮಹಾಜನ, ಅನಿಲಕುಮಾರ ಹಾಲಕುಡೆ, ಶರಣಪ್ಪ ಬಿರಾದಾರ ಇತರರಿದ್ದರು.
Published on

ಕಮಲನಗರ: ಯಾರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ನೀಡುವುದಿಲ್ಲವೋ, ಅಂತಹ ಅಗತ್ಯವುಳ್ಳವರಿಗೆ ಯಾವುದೇ ಗ್ಯಾರಂಟಿಯಿಲ್ಲದೇ ಡಾ.ಚನ್ನಬಸವ ಪಟ್ಟದ್ದೇವರ ಬ್ಯಾಂಕ್ ಸಾಲ ನೀಡಲಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ದಾನಾ ಕಾಂಪ್ಲೆಕ್ಸ್ನಲ್ಲಿ ಮಂಗಳವಾರ ಡಾ.ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಸಂಘದ ನೂತನ ಶಾಖೆಯ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬುಟ್ಟಿ ನೇಯುವವರಿಗೆ, ಚಪ್ಪಲಿ ಹೊಲಿಯುವವರಿಗೆ, ಕ್ಷೌರಿಕರಿಗೆ, ಸಣ್ಣ ಸಣ್ಣ ವ್ಯಾಪಾರಿಗಳಿಗೆ ದೊಡ್ಡ ದೊಡ್ಡ ಬ್ಯಾಂಕ್‌ಗಳು ಸಾಲ ನೀಡುವುದಿಲ್ಲ. ಅಂಥವರನ್ನು ಗುರುತಿಸಿ ಪ್ರಥಮ ಆದ್ಯತೆ ಮೇರೆಗೆ ಪಟ್ಟದ್ದೇವರ ಬ್ಯಾಂಕ್ ಸಾಲ ನೀಡಲಿದೆ ಎಂದರು.

ದಿವ್ಯ ನೇತೃತ್ವ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳ ಪಾತ್ರ ಹಿರಿದು. ವ್ಯಾಪಾರಿಗಳ ಅನ್ನದಾತರ ಸೇರಿದಂತೆ ಜನ ಸಾಮಾನ್ಯರ ಆರ್ಥಿಕ ಬೆಳವಣಿಗೆಗೆ ಡಾ.ಚನ್ನಬಸವ ಪಟ್ಟದ್ದೇವರ ಬ್ಯಾಂಕ್ ಸದಾ ಸಿದ್ಧವಿದೆ ಎಂದರು.

ಬ್ಯಾಂಕಿನ ಅಧ್ಯಕ್ಷ ಡಿ.ಕೆ ಸಿದ್ರಾಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ೧೯ ವರ್ಷಗಳಲ್ಲಿ ಬ್ಯಾಂಕ್ ನೂರಾರು ಕೋಟಿ ವಹಿವಾಟು ಮಾಡಿದೆ. ಭಾಲ್ಕಿ, ಔರಾದ್, ಬೀದರ್‌ನಲ್ಲಿ ಹತ್ತಾರು ಕೋಟಿ ಉಳಿತಾಯ ಠೇವಣಿ ಇರಿಸಲಾಗಿದೆ. ಕೋಟ್ಯಾಂತರ ರೂ. ಸಾಲ ನೀಡಲಾಗಿದ್ದು, ಶೇ.೯೯ರಷ್ಟು ವಸೂಲಿ ಮಾಡಿದ ಜಿಲ್ಲೆಯ ಚೊಚ್ಚಲ ಬ್ಯಾಂಕ್ ಎಂಬ ಹೆಸರು ಗಳಿಸಿದೆ ಎಂದರು.

ಬ್ಯಾಂಕ್‌ನ ಸಿಇಒ ಗಣಪತಿ ಬಾವಗೆ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ, ಜೈರಾಜ ಖಂಡ್ರೆ, ರಾಜಶೇಖರ ಅಷ್ಟೂರೆ, ಶರದ ಸಿರ್ಸೆ, ಬಂಡೆಪ್ಪ ಕಂಟೆ, ರವೀಂದ್ರ ಮೀಸೆ, ಪ್ರಕಾಶ ಘೂಳೆ, ತಮ್ಮಣ್ಣ ದೇಗಲವಾಡೆ, ಮನ್ಮಥಪ್ಪ ಬಿರಾದಾರ, ರೇಖಾ ಮಹಾಜನ, ಅನಿಲಕುಮಾರ ಹಾಲಕುಡೆ, ಶರಣಪ್ಪ ಬಿರಾದಾರ, ಸುರೇಶ ಸೊಲ್ಲಾಪುರೆ, ರಾಜಕುಮಾರ ಬಿರಾದಾರ, ಅಶೋಕ ಪಾಟೀಲ್, ಗುರುಶಾಂತ ಶಿವಣಕರ, ಚನ್ನಬಸವ ಘಾಳೆ, ಅವಿನಾಶ ಶಿವಣಕರ, ಕಲ್ಲೇಶ ಉದಗಿರೆ, ಡಾ.ವಿಶ್ವನಾಥ ಚಿಕಮುರ್ಗೆ ಇತರರಿದ್ದರು.

ವೀರಣ್ಣ ಕುಂಬಾರ ಸ್ವಾಗತಿಸಿದರು. ಜಗನ್ನಾಥ ಚಿಟಮೆ ವಂದಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು.

ಕಷ್ಟದಲ್ಲಿದ್ದವರ ಕೈ ಹಿಡಿದು ಮೇಲಕ್ಕೆತ್ತಿದರೆ ಅದು ಅಣ್ಣ ಬಸವಣ್ಣನವರು ಹೇಳುವಂತೆ ಪೂಜೆ ಹಾಗೂ ಧ್ಯಾನಕ್ಕೆ ಸಮಾನವಾಗಿದೆ. ಸಹಕಾರ ಕ್ಷೇತ್ರ ಪವಿತ್ರವಾಗಿರಲು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ನಿಸ್ವಾರ್ಥದಿಂದ ದುಡಿಯಬೇಕು. ಆ ಕಾರ್ಯ ಕಳೆದ ೧೯ ವರ್ಷಗಳಿಂದ ನಮ್ಮ ಬ್ಯಾಂಕ್ ಮೂಲಕ ನಡೆಯುತ್ತಿರುವುದು ನಮಗೆ ಹೆಮ್ಮೆ ಇದೆ.

| ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು

ಅಧ್ಯಕ್ಷರು ಅನುಭವ ಮಂಟಪ ಟ್ರಸ್ಟ್ ಬಸವಕಲ್ಯಾಣ

ಒಂದು ಕಾಲದಲ್ಲಿ ನಮ್ಮ ಶ್ರೀಗಳು ಸಹಕಾರ ಬ್ಯಾಂಕ್‌ನಿಂದ ಬರೀ ವಿಶ್ವಾಸದ ಮೇಲೆ ೨೫ ಸಾವಿರ ಸಾಲ ತಂದು ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಶಿಕ್ಷಣದ ಜೊತೆಗೆ ಸಣ್ಣ ಸಣ್ಣ ವ್ಯಾಪಾರಿಗಳಿಗೆ ವಿಶ್ವಾಸದ ಮೇಲೆ ಹಣ ನೀಡಿ ದುರ್ಬಲರನ್ನು ಸಶಕ್ತರನ್ನಾಗಿ ಮಾಡುವುದೇ ನಮ್ಮ ಬ್ಯಾಂಕಿನ ಗುರಿಯಾಗಿದೆ.

|ಶ್ರೀ ಗುರುಬಸವ ಪಟ್ಟದ್ದೇವರು

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net