ಅಗತ್ಯವಿದ್ದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆ

MDG mescom
ಗೋಣಿಬೀಡು ಸಮೀಪದ ಅಬ್ದಾರೆಯಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಶಾಸಕಿ ನಯನಾ ಮೋಟಮ್ಮ ಭೂಮಿಪೂಜೆ ನೆರವೇರಿಸಿದರು. ದಿನೇಶ್, ರಾಧಾ ಮಿತ್ರೇಶ್, ಲಕ್ಷ್ಮೀ, ಸುನೀಲ್‌ಕುಮಾರ್, ಪ್ರವೀಣ್‌ಕುಮಾರ್, ಸಲ್ಮಾ, ಪ್ರಹ್ಲಾದ್ ಇತರರಿದ್ದರು.
Published on

ಮೂಡಿಗೆರೆ: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಮಿತಿಮೀರಿದೆ. ವಿದ್ಯಾರ್ಥಿಗಳು ಓದಿಕೊಳ್ಳಲು, ಕೃಷಿ ಹಾಗೂ ಕುಡಿಯುವ ನೀರಿಗೆ ವಿದ್ಯುತ್ ಇಲ್ಲದೆ ಸಮಸ್ಯೆಯಾಗಿರುವ ಕುರಿತು ದೂರುಗಳು ಬರುತ್ತಿರುವ ಕಾರಣ ಅಗತ್ಯವಿರುವ ಎಲ್ಲ ಕಡೆ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ತಯಾರಿ ನಡೆಸಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

ಗೋಣಿಬೀಡು ಸಮೀಪ ಅಬ್ದಾರೆ ಎಂಬಲ್ಲಿ 9.62 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ವಿದ್ಯುತ್ ಉಪಕೇಂದ್ರಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕಾಫಿ ತೋಟದಲ್ಲಿ ವಿದ್ಯುತ್‌ಲೈನ್ ಹಾದುಹೋಗಿದ್ದರಿಂದ ಮಳೆಗಾಲದಲ್ಲಿ ಮರ ಬಿದ್ದು ವಿದ್ಯುತ್ ಕಂಬ ಮತ್ತು ತಂತಿ ತುಂಡಾಗಿ ನಿರಂತರವಾಗಿ ವಿದ್ಯುತ್ ಕಡಿತಗೊಳ್ಳುತ್ತಿದೆ. ಸ್ಥಳೀಯವಾಗಿ ವಿದ್ಯುತ್ ಪ್ರಸರಣಾ ಉಪ ಕೇಂದ್ರ ಸ್ಥಾಪನೆಯಾದರೆ ತೊಂದರೆಯಿಲ್ಲದೆ ದಿನದ 24 ಗಂಟೆಯೂ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಬಹುದು ಎಂದರು.

ಮಲ್ಲಂದೂರು ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರದ ಕಾಮಗಾರಿ ನಡೆಯುತ್ತಿದೆ. ಗೋಣಿಬೀಡು ಉಪಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಹಾಂದಿ ಗ್ರಾಮಕ್ಕೆ ಉಪಕೇಂದ್ರ ಮಂಜೂರಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಬಾಳೆಹೊಳೆ ಗ್ರಾಮದಲ್ಲಿ ಉಪಕೇಂದ್ರ ಸ್ಥಾಪನೆಗೆ ತಯಾರಿ ನಡೆದಿದೆ. 5 ವರ್ಷದ ಅವಧಿಯಲ್ಲಿ ಕ್ಷೇತ್ರದ ಎಲ್ಲ ಕಡೆ ವಿದ್ಯುತ್ ಉಪಕೇಂದ್ರ ಸ್ಥಾಪಿಸಿ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಮಾಡಲು ಪ್ರಯತ್ನಿಸಲಾಗುವುದು. ವಿದ್ಯುತ್ ಉಪಕೇಂದ್ರ ನಿರ್ಮಿಸಲು ಅಧಿಕಾರಿಗಳು ಸೂಕ್ತ ಜಾಗ ಗುರುತಿಸುತ್ತಿದ್ದಾರೆ. ಜಾಗವನ್ನು ಮೆಸ್ಕಾಂನಿಂದ ಖರೀದಿಸಲಾಗುತ್ತದೆ. ಕೆಲವೆಡೆ ಜಾಗದ ತಕರಾರಿನಿಂದ ಉಪಕೇಂದ್ರ ಸ್ಥಾಪಿಸಲು ಕಷ್ಟವಾಗುತ್ತಿದೆ. ಅಧಿಕಾರಿಗಳು ಗುರುತಿಸಿರುವ ಜಾಗಕ್ಕೆ ಯಾರೂ ತಕರಾರು ಮಾಡಬೇಡಿ ಎಂದು ಮನವಿ ಮಾಡಿದರು.

ಗೋಣಿಬೀಡು ಗ್ರಾಪಂ ಅಧ್ಯಕ್ಷ ದಿನೇಶ್, ಸದಸ್ಯೆ ರಾಧಾ ಮಿತ್ರೇಶ್, ಚಿನ್ನಿಗ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಸುನೀಲ್‌ಕುಮಾರ್, ಪ್ರವೀಣ್‌ಕುಮಾರ್, ಸಲ್ಮಾ, ಪ್ರಹ್ಲಾದ್, ಮೆಸ್ಕಾಂ ಮುಖ್ಯ ಇಂಜಿನಿಯರ್ ಬಸಪ್ಪ, ಅಧೀಕ್ಷಕ ಇಂಜಿನಿಯರ್ ಎಂ.ಎಸ್.ಮಂಜುನಾಥ, ಎಇಇ ಜಿತೇಂದ್ರಕುಮಾರ್, ಜೆ.ಇ.ರವಿಕುಮಾರ್, ಮುಖಂಡರಾದ ಎಚ್.ಜಿ.ಸುರೇಂದ್ರ, ಎ.ಜಿ.ಸುಬ್ರಾಯ ಗೌಡ, ಜೆ.ಎಸ್.ರಘು, ಕೆ.ಟಿ.ಜಗದೀಶ್, ಎಚ್.ಆರ್.ಅಶೋಕ್, ರಮೇಶ್, ಎಚ್.ಆರ್.ಪುಟ್ಟಸ್ವಾಮಿ, ಯು.ಎಚ್.ರಾಜಶೇಖರ್, ಯು.ಪಿ.ಜಗದೀಶ್, ಸಿ.ವಿ.ಸುದೀಪ್, ಜಯರಾಮ್ ಗೌಡ ಇತರರಿದ್ದರು.

ಮೂಡಿಗೆರೆ ತಾಲೂಕಿನ ದೇವರುಂದ, ಮೇಕನಗದ್ದೆ, ಹಿರೇಶಿಗರ, ಚಿಮ್ಮಟಿಗೆರೆ ಸೇರಿದಂತೆ ಸಕಲೇಶಪುರ ತಾಲೂಕಿಗೆ ಹೊಂದಿಕೊಂಡಿರುವ ಹಲವಾರು ಗ್ರಾಮಗಳಿಗೆ ಹಾಸನ ಜಿಲ್ಲೆಯಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಅದಕ್ಕಾಗಿ 40 ಕಡೆ ಟಿಸಿ ಅಳವಡಿಸಲಾಗಿದೆ. ಈಗ ಗೋಣಿಬೀಡಿನಲ್ಲಿ ಉಪಕೇಂದ್ರ ಸ್ಥಾಪನೆಯಾದನಂತರ ಹಾಸನದಿಂದ ಪಡೆದಿದ್ದ ಸಂಪರ್ಕವನ್ನು ಮೊಟಕುಗೊಳಿಸಿ ಗೋಣಿಬೀಡು ಉಪಕೇಂದ್ರದಿಂದ ವಿದ್ಯುತ್ ಪೂರೈಕೆ ಮಾಡಲಾಗುವುದು. ಮೂಡಿಗೆರೆ ವಿದ್ಯುತ್ ಕೇಂದ್ರದಿಂದ ನೇರವಾಗಿ ಗೋಣಿಬೀಡು ಉಪಕೇಂದ್ರಕ್ಕೆ ವಿದ್ಯುತ್ ಪೂರೈಕೆಯಾಗುವ ಕಾರಣ ಚಿನ್ನಿಗ, ಗೋಣಿಬೀಡು, ಹಂತೂರು, ಕಿರುಗುಂದ ಮತ್ತು ಊರುಬಗೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ದಿನವಿಡೀ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡಲಾಗುವುದು. 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉಪಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಮಾರುತಿ ತಿಳಿಸಿದರು.

ಗೋಣಿಬೀಡು ಹೋಬಳಿಗೆ 2014ರಲ್ಲಿ ವಿದ್ಯುತ್ ಉಪಕೇಂದ್ರ ಮಂಜೂರಾಗಿದೆ. ಜಾಗ ಸಿಗದ ಕಾರಣ 10 ವರ್ಷದಲ್ಲಿ ಕಾಮಗಾರಿ ನಡೆಯದೆ ಯೋಜನೆ ನನೆಗುದಿಗೆ ಬಿದ್ದಿತ್ತು. ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಉದುಸೆ ಗ್ರಾಮದ ಸಿ.ಹಾಲಪ್ಪ ಮತ್ತು ದುಂಡುಗ ಗ್ರಾಮದ ಬಿ.ಸುಬ್ಬೇಗೌಡ ಅವರು ಇಂಧನ ಸಚಿವರು, ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಬಳಿ ನಿರಂತರವಾಗಿ ಅಲೆದಾಡಿ ಗೋಣಿಬೀಡಿಗೆ ವಿದ್ಯುತ್ ಉಪಕೇಂದ್ರ ಮಂಜೂರು ಮಾಡಿಸಿದ್ದರು. ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಅಶ್ವತ್ಥ್ ನಾರಾಯಣ ಅವರು ಗೋಣಿಬೀಡು ಸಮೀಪದ ಹಂತೂರು ಗ್ರಾಮದದಲ್ಲಿರುವ ಪತ್ನಿಯ ತವರು ಮನೆಗೆ ಭೇಟಿ ನೀಡಿದಾಗ ಸ್ಥಳೀಯರು ವಿದ್ಯುತ್ ಉಪಕೇಂದ್ರಕ್ಕೆ ಅಬ್ದಾರೆ ಗ್ರಾಮದಲ್ಲಿರುವ ಕೌಶಲಾಭಿವೃದ್ಧಿ ಇಲಾಖೆಯ 4 ಎಕರೆ ಜಾಗ ನೀಡುವಂತೆ ಕೇಳಿಕೊಂಡಿದ್ದರು. ಉಪಮುಖ್ಯಮಂತ್ರಿ ಒಪ್ಪಿಗೆ ನೀಡಿದ ಬಳಿಕ ಮೆಸ್ಕಾಂನಿಂದ 4 ಎಕರೆ ಜಾಗ ಖರೀದಿಸಲಾಗಿದೆ. ಉಪಕೇಂದ್ರಕ್ಕೆ ಮಂಜೂರಾತಿಗೆ ಪ್ರಯತ್ನಿಸಿದ ಸ್ಥಳೀಯರಾದ ಯು.ಸಿ.ಹಾಲಪ್ಪ ಹಾಗೂ ಡಿ.ಬಿ.ಸುಬ್ಬೇಗೌಡ ಅವರಿಬ್ಬರೂ ಇತ್ತೀಚೆಗೆ ಮೃತಪಟ್ಟರು. ಗುರುವಾರ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರಿಬ್ಬರ ಹೆಸರನ್ನು ಪ್ರಸ್ತಾಪಿಸದಿದ್ದಕ್ಕೆ ವೇದಿಕೆ ಮುಂಭಾಗದಲ್ಲಿದ್ದ ಸ್ಥಳೀಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಅವರಿಬ್ಬರ ಹೆಸರನ್ನು ಪ್ರಸ್ತಾಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net