

ಕೂಡ್ಲಿಗಿ: ಕ್ಷೇತ್ರದ ದಮನಿತ ಜನರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಹುರಡಿಹಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ತಾಲೂಕಿನಲ್ಲಿ ಅನಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇನ್ನೂ ಕುಗ್ರಾಮಗಳಲ್ಲೆ ವಾಸಿಸುತ್ತಿದ್ದಾರೆ. ಇದರಿಂದಾಗಿ ಜನರಿಗೆ ಸೌಲಭ್ಯಗಳು ಮರೀಚಿಕೆಯಾಗಿವೆ. ನಾನು ಶಾಸಕನಾದ ಬಳಿಕ ಎಲ್ಲ ಗ್ರಾಮಗಳಿಗೆ ಸಂಚರಿಸಿ ಜನರ ಸಮಸ್ಯೆ ಆಲಿಸಿದ್ದೇನೆ. ಗ್ರಾಪಂ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿ ಸಮಸ್ಯೆಗಳ ಪಟ್ಟಿ ಮಾಡಿಕೊಂಡಿದ್ದೇನೆ. ಹಂತ ಹಂತವಾಗಿ ಸಂಬಂಧಿಸಿದ ಸಚಿವರು ಹಾಗೂ ಮುಖ್ಯಮಂತ್ರಿಗೆ ಕ್ಷೇತ್ರದ ಸಮಸ್ಯೆಗಳನ್ನು ಮನವರಿಕೆ ಮಾಡಿ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.
ನೀರಾವರಿ ಯೋಜನೆ ಪೂರ್ಣಗೊಳ್ಳುತ್ತಿದ್ದು, ಈ ಮೂಲಕ ಕೃಷಿಕರ ಬದುಕು ಹಸನಾಗಲಿದೆ. ಇದಕ್ಕೆ ಪೂರಕವಾಗಿ ಕೃಷಿ ಮಾರುಕಟ್ಟೆಗೆ ಆಡಳಿತ ಮಂಡಳಿ ರಚಿಸಿ ಮಾರುಕಟ್ಟೆಗೆ ಬಲ ತುಂಬಿರುವೆ. ಕ್ಷೇತ್ರದಲ್ಲಿ ಪ್ರಾಥಮಿಕ ಹಾಗೂ ಸಮುದಾಯ ಕೇಂದ್ರಗಳಿಗೆ ವೈದ್ಯರ ನಿಯೋಜನೆ ಹಾಗೂ ಮೂಲಸೌಲಭ್ಯ ಒದಗಿಸಿರುವೆ. ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕಿನಲ್ಲಿ ಮಳೆಗಾಲದಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಅಗತ್ಯವಿದ್ದಲ್ಲಿ ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ರತ್ನಮ್ಮ ಹೊನ್ನಪ್ಪ, ಸದಸ್ಯೆ ಇಂದ್ರಮ್ಮ ಸೋಮಣ್ಣ, ಪ್ರಮುಖರಾದ ಯೋಗನಂದಾ, ನರೇಂದ್ರ, ಚಿದಾನಂದ, ಲೋಕೇಶ್, ತಾಪಂ ನಿವೃತ್ತ ಇಒ ಜಿ.ಎಂ.ಬಸಣ್ಣ, ತಾಪಂ ಮಾಜಿ ಸದಸ್ಯ ವೀರೇಶ್, ಗಾಣಗಟ್ಟೆ ಮಹಾಂತೇಶ್ ಇತರರಿದ್ದರು.