ಅಗತ್ಯದಷ್ಟು ವಸತಿ ಮಂಜೂರು ಮಾಡಲು ಸಿದ್ಧ

28kls1 web
Published on

ಕಳಸ: ಕಳಸ ತಾಲೂಕಿಗೆ ಅಗತ್ಯವಿರುಷ್ಟು ಮನೆಗಳನ್ನು ಮಂಜೂರು ಮಾಡಲು ಸಿದ್ಧ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದರು. ಹೊರನಾಡು ಅನ್ನಪೂರ್ಣೆಶ್ವರಿ ದೇಗುಲಕ್ಕೆ ಭಾನುವಾರ ಸಚಿವ ಭೇಟಿ ನೀಡಿದ ಸಂದರ್ಭದಲ್ಲಿ ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ, ಕಳಸ ಗ್ರಾಪಂ ಅಧ್ಯಕ್ಷೆ ಸುಜಯಾ ಸದಾನಂದ ಅವರು ಕಳಸ ತಾಲೂಕಿನಲ್ಲಿ ಬಹಳಷ್ಟು ವಸತಿ ಅವಶ್ಯಕತೆಯಿದ್ದು ಅದನ್ನು ಕೊಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಚಿವ, ತಾಲೂಕಿನ ಆರು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿ ಮನೆಗಳ ಪಟ್ಟಿ ಮಾಡಿ, ಫಲಾನುಭವಿಗಳ ಆಧಾರ್ ಕಾರ್ಡ್ ಮತ್ತು ದಾಖಲಾತಿಗಳೊಂದಿಗೆ ಕಳುಹಿಸಿಕೊಡಿ. ಎಲ್ಲವೂ ನ್ಯಾಯಬದ್ಧವಾಗಿರಬೇಕು. ನಾನು ಮತ್ತೆ ಅಕ್ಟೋಬರ್​ನಲ್ಲಿ ಹೊರನಾಡಿಗೆ ಬರಲಿದ್ದೇನೆ. ಅಷ್ಟರೊಳಗೆ ಬೇಡಿಕೆಯಷ್ಟು ವಸತಿ ಮಂಜೂರು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಅತಿವೃಷ್ಟಿಯಿಂದ ಬಹಳಷ್ಟು ಜನ ಮನೆ ಕಳೆದುಕೊಂಡಿದ್ದಾರೆ. ಅವರಿಗೆ ನೆಮ್ಮದಿಯ ಬದುಕಿನ ವಾತಾವರಣ ಸೃಷ್ಟಿಸಬೇಕು. ಕಳಸ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಜೋರು ಮಳೆಯಾದಾಗ ಹೆಬ್ಬಾಳೆ ಸೇತುವೆ ಮುಳುಗುತ್ತದೆ. ಸೇತುವೆ ಎತ್ತರಿಸಬೇಕು ಎಂದು ಡಾ. ಜಿ.ಭೀಮೇಶ್ವರ ಜೋಷಿ ಸಚಿವರ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net