

ಕಲಬುರಗಿ: ಒಂದು ದೇಶದ ಪ್ರಾಕೃತಿಕ ಸಮತೋಲನಕ್ಕೆ ಆ ದೇಶದ ಒಟ್ಟು ಭೂ ಪ್ರದೇಶದ ಶೇ.33 ಅರಣ್ಯ ಪ್ರದೇಶ ಇರಬೇಕು. ಭಾರತ ಮತ್ತು ಕರ್ನಾಟಕದಲ್ಲಿ ಈ ಪ್ರಮಾಣ ಶೇ.22ರ ಆಸುಪಾಸಿನಲ್ಲಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಸಿದ್ದರಾಮ ಕುಸೂರ ಹೇಳಿದರು.
ನಗರದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ, ಅರಣ್ಯ ಇಲಾಖೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಅರಣ್ಯ ದಿನಾಚರಣೆಯಲ್ಲಿ ಮಾತನಾಡಿ, ಅರಣ್ಯ ಬಹುಪಯೋಗಿ ಆಗಿದೆ. ಅರಣ್ಯದ ಉತ್ಪನ್ನಗಳು ಹಲವು ಸಮುದಾಯಗಳಿಗೆ, ಜೀವಗಳಿಗೆ ಆಧಾರವಾಗಿವೆ. ಅರಣ್ಯ ಉತ್ಪನ್ನಗಳ ಮೇಲೆ ಜನರು ಅವಲಂಭಿತರಾಗಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಕಾಡುಗಳು ಜೀವ ನೀಡುವ ಆಮ್ಲಜನಕವನ್ನು ಒದಗಿಸಿ, ಬಹುದೊಡ್ಡ ಕೊಡುಗೆ ನೀಡುತ್ತವೆ ಎಂದರು.
ಪ್ರಸಕ್ತ ವರ್ಷ ಅರಣ್ಯ ಮತ್ತು ಆಹಾರ ಘೋಷವಾಕ್ಯವಿದೆ. ಅರಣ್ಯವೂ ಪ್ರಾಣಕ್ಕೆ ಬಹುಮುಖ್ಯವಾದ ಆಹಾರ ಆಮ್ಲಜನಕವನ್ನು ನೀಡುತ್ತದೆ. ಅಲ್ಲದೇ ಔಷಧ ಮತ್ತು ಆಹಾರ ಪದಾರ್ಥಗಳನ್ನು ಒದಗಿಸುತ್ತದೆ. ಅರಣ್ಯಗಳ ಮೇಲೆ ಅವಲಂಭಿಸಿಯೇ ಜೀವನ ನಡೆಸುವ ಜನರು, ಪ್ರಾಣಿಗಳು ಇದ್ದಾರೆ. ಅರಣ್ಯ ಮರೆಯಾದಂತೆ ನಮ್ಮ ಪೌಷ್ಠಿಕಾಂಶಯುತ ಆಹಾರವೂ ಸತ್ವ ಕಳೆದುಕೊಳ್ಳುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ವಿವೇಕಾನಂದ ಮಾತನಾಡಿ, ಕಾಡು ಪ್ರಾಣಿಗಳು ಮತ್ತು ಪಗಳು ಅರಣ್ಯದ ಅಳಿವು ಉಳಿವಿನ ಮೇಲೆ ನಿರ್ಧರಿತವಾಗುತ್ತದೆ. ಜೀವವೈವಿದ್ಯತೆಯನ್ನು ಕಾಪಾಡಿದರೆ ನಮ್ಮ ಜೀವನ, ಆರೋಗ್ಯವೂ ಸದೃಢವಾಗಿರುತ್ತದೆ. ಪರಸ್ಪರ ಅವಲಂಬನೆ ಇದ್ದು, ಪರಿಸರಕ್ಕೆ, ಪ್ರಾಣಿಗಳಿಗೆ ಧಕ್ಕೆ ಆಗದಂತೆ ಜೀವನ ನಡೆಸಬೇಕು. ಅರಣ್ಯ ನಾಶವನ್ನು ಮಾಡಬಾರದು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ.ರಾಮಕೃಷ್ಣ ರೆಡ್ಡಿ ಮಾತನಾಡಿ, ಮರಗಿಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಬೇಕು. ಸುಸ್ಥಿರ ಬದುಕು ಸಾಗಿಸಬೇಕು ಎಂದರು.
ವಲಯ ಅರಣ್ಯಾಧಿಕಾರಿ ಸಂಜೀವ ಚವ್ಹಾಣ್, ಸಸ್ಯಶಾಸ್ತ್ರದ ವಿಭಾಗದ ಮುಖ್ಯಸ್ಥ ಡಾ.ಲತಾದೇವಿ, ಡಾ.ಶೈಲಾ ಎಚ್., ಕಾರ್ಯಕ್ರಮ ಸಂಯೋಜಕ ಪವನ ಎಂ., ಬಸವರಾಜ ಬೀಳಗಿ ಇತರರಿದ್ದರು.