

ಹನೂರು: ಪಟ್ಟಣದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆಗೆ ಅಗತ್ಯ ದಾಖಲೆಗಳನ್ನು ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಆಗಮಿಸಿದ್ದ ಶಿಕ್ಷಕರು ಗಂಟೆಗಟ್ಟಲೇ ಕಾದು ಕುಳಿತು ತೊಂದರೆ ಅನುಭವಿಸಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳುವ ಹಿನ್ನಲೆ 254 ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯೋಜಿಸಲಾಗಿದೆ. ಅಗತ್ಯ ದಾಖಲೆಗಳನ್ನು ನೀಡಲು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ನಿಗಧಿ ಪಡಿಸಲಾಗಿತ್ತು. ಅದರಂತೆಯೇ ನಿಯೋಜಿಸಲ್ಪಟ್ಟ ಶಿಕ್ಷಕರು ಬೆಳಗ್ಗೆ 10.30ರಿಂದಲೇ ಶಾಲೆಯತ್ತ ಆಗಮಿಸಿದರು. ಆದರೆ ಕುಟುಂಬಗಳ ಪಟ್ಟಿ, ಗುರುತಿನ ಚೀಟಿ ಹಾಗೂ ಇನ್ನಿತರೆ ಅಗತ್ಯ ದಾಖಲೆಗಳನ್ನು ನೀಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಳಂಬ ಮಾಡಿದರು. ಇದರಿಂದ ಶಿಕ್ಷಕರು ಗಂಟೆಗಟ್ಟಲೇ ಶಾಲಾವರಣದಲ್ಲಿ ಕಾದು ಕುಳಿತು ತೊಂದರೆ ಅನುಭವಿಸಿದರು. ಅಧಿಕಾರಿಗಳ ಈ ಕಾರ್ಯವೈಖರಿಯ ಬಗ್ಗೆ ಶಿಕ್ಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 2.30ರ ಬಳಿಕ ಅಗತ್ಯ ದಾಖಲೆಗಳನ್ನು ನೀಡಲಾಯಿತು. ಶಿಕ್ಷಕರು ಬೇಸರದಿಂದಲೇ ದಾಖಲೆಗಳನ್ನು ಪಡೆದು ಹಿಂತಿರುಗಿದರು.
ಸಮೀಕ್ಷಾ ಕಾರ್ಯಕ್ಕೆ ತೊಡಕು: ಸಮೀಕ್ಷೆಯು ಸೋಮವಾರದಿಂದಲೇ ಆಗಬೇಕಿತ್ತು. ಆದರೆ ಅಗತ್ಯ ದಾಖಲೆಯನ್ನು ನೀಡುವಲ್ಲಿ ವಿಳಂಬ ಮಾಡಿದ ಪರಿಣಾಮ ಶಿಕ್ಷಕರು ಮನೆಮನೆಗೆ ತೆರಳಿ ಸಮೀಕ್ಷೆ ಕಾರ್ಯ ಆರಂಭಿಸಲು ಸಾಧ್ಯವಾಗಲಿಲ್ಲ. ಇದರಿಂದ ಸಮೀಕ್ಷಾ ಕಾರ್ಯಕ್ಕೆ ದಾಖಲೆಗಳನ್ನು ನಿಗಧಿತ ಅವಧಿಯೊಳಗೆ ನೀಡದಿರುವುದು ತೊಡಕಾಗಿ ಪರಿಣಮಿಸಿತು. ಮಂಗಳವಾರ ಸಮೀಕ್ಷೆ ಕಾರ್ಯವನ್ನು ಆರಂಭಿಸುವುದಾಗಿ ಶಿಕ್ಷಕರು ವಿಜಯವಾಣಿಗೆ ತಿಳಿಸಿದರು.