ಬಳ್ಳಾರಿ : ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಸೆ. 27 ರಂದು ಜಿಲ್ಲೆಗೆ ಆಗಮಿಸಲಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆಗಳ ಪೂರಕ ಮಾಹಿತಿಯೊಂದಿಗೆ ಸಿದ್ಧರಿರಬೇಕು ಎಂದು ಎಡಿಸಿ ಮಹಮ್ಮದ್ ಎನ್. ಝುಬೇರ್ ಸೂಚಿಸಿದರು.
ನಗರದ ನೂತನ ಡಿಸಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಸಮುದಾಯದ ಅಭಿವೃದ್ಧಿಗಾಗಿ ಹಮ್ಮಿಕೊಂಡ ವಿವಿಧ ಯೋಜನೆ, ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಸಮಿತಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಇವರ ನೇತೃತ್ವದ 19 ಜನ ಸದಸ್ಯರನ್ನೊಳಗೊಂಡ ಸಮಿತಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ. ಸೆ.27 ರಂದು ಆಗಮಿಸಲಿರುವ ಸಮಿತಿಯ ಸದಸ್ಯರನ್ನು ಗಡಿಭಾಗದಲ್ಲಿ ಆಹ್ವಾನಿಸಬೇಕು. ಶಿಷ್ಠಾಚಾರ ಪಾಲಿಸಿ, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು ಎಂದು ಹೇಳಿದರು. ಸದಸ್ಯರ ಆಪ್ತರೊಂದಿಗೆ ಸಮನ್ವಯತೆ ಸಾಧಿಸಿ, ಅಗತ್ಯ ಮಾಹಿತಿ ಮತ್ತು ಸೌಲಭ್ಯ ಒದಗಿಸಬೇಕು ಎಂದರು. ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನ ಬಳಕೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ, ಬಳಕೆಯಾಗದ ಅನುದಾನ, ಯೋಜನೆ ಮತ್ತು ಸೌಲಭ್ಯ ವಿತರಣೆಯಲ್ಲಿ ವಿಳಂಬ ಹಾಗೂ ವಿವಿಧ ಯೋಜನೆಗಳ ಮಾಹಿತಿ ಸಮರ್ಪಕವಾಗಿ ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ನಡೆದ ಎಸ್‌ಸಿ-ಎಸ್‌ಟಿ ದೌರ್ಜನ್ಯ ಪ್ರಕರಣಗಳು, ಭೂಒಡೆತನ ಯೋಜನೆ, ನಿಗಮಗಳಡಿ ನೀಡುವ ವಿವಿಧ ಸಾಲ-ಸೌಲಭ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಲ್ಲ ವಿವರ ಹಾಗೂ ಇತರೆ ಮಾಹಿತಿಯೂ ಒಳಗೊಂಡು ಉತ್ತರಿಸಲು ಸಿದ್ಧರಿರಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.