ಅಗತ್ಯ ಕ್ರಿಯಾಯೋಜನೆ ಸಲ್ಲಿಸಿ

15..8
ಮುದೇನೂರ ಗ್ರಾಮದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ಬೆಳಗಾವಿ ಸಂಸದೆ ಮಂಗಲ ಸುರೇಶ ಅಂಗಡಿ ಉದ್ಘಾಟಿಸಿದರು. ಭೀಮಪ್ಪ ದೊಡಮನಿ, ಮಲ್ಲವ್ವ ಲಮಾಣಿ ಇದ್ದರು.
Published on

ಸಂಸದೆ ಮಂಗಲ ಅಂಗಡಿ ಸೂಚನೆ
ರಾಮದುರ್ಗ: ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಪ್ರತ್ಯೇಕ ಅನುದಾನ ಇರುವುದಿಲ್ಲ. ಸಂಸದರ ಪ್ರದೇಶಾಭಿವೃದ್ಧಿ ಅನುದಾನವನ್ನೇ ಕೊಡಬೇಕಾಗುತ್ತದೆ. ಅಕಾರಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಮೂಲ ಸೌಲಭ್ಯ ಕಲ್ಪಿಸುವ ಅಗತ್ಯ ಯೋಜನೆ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಬೇಕು ಎಂದು ಬೆಳಗಾವಿ ಸಂಸದೆ ಮಂಗಲ ಸುರೇಶ ಅಂಗಡಿ ಹೇಳಿದರು.
ತಾಲೂಕಿನ ಮುದೇನೂರ ಗ್ರಾಮದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಸ್ಥರು ತಮ್ಮ ವಾರ್ಡ್, ಗ್ರಾಮದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕುರಿತು ಬೇಡಿಕೆ ಸಲ್ಲಿಸಿದಲ್ಲಿ ಅವುಗಳನ್ನು ಪರಿಶೀಲಿಸಿ, ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಕುಡಿಯುವ ನೀರಿನ ಸಮಸ್ಯೆ ಕುರಿತು ಪಿಡಿಒ ಆನಂದ ಜಂಬಗಿ, ವಿವಿಧ ಇಲಾಖೆ ಅಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕಲುಷಿತ ನೀರು ಕುಡಿದು ಈ ಹಿಂದೆ ಉಂಟಾದ ಸಮಸ್ಯೆ ಕುರಿತು ಚರ್ಚಿಸಿ, ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಅಕಾರಿಗಳ ಲೋಪಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಮಧ್ಯ ಪ್ರವೇಶಿಸಿದ ತಾಪಂ ಇಒ ಪ್ರವೀಣಕುಮಾರ ಸಾಲಿ, ಕುಡಿಯುವ ನೀರಿನ ಸಮಸ್ಯೆ ಕುರಿತು ಮೇಲಿಂದ ಮೇಲೆ ಅಭಿವೃದ್ಧಿ ಅಕಾರಿಗಳಿಗೆ ಸೂಚನೆ ನೀಡುತ್ತಿರುತ್ತೇನೆ. ಆದರೆ, ಮುದೇನೂರ ಗ್ರಾಮದಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದೇನೆ. ಇನ್ನು ಮುಂದೆ ಗ್ರಾಮದಲ್ಲಿ ಸಮಸ್ಯೆ ಉಂಟಾಗದಂತೆ ಸಂಬಂಧಪಟ್ಟ ಇಲಾಖೆಯ ಅಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.
ಪಂಚಾಯಿತಿಯಲ್ಲಿ ಕೆಲಸ ನಡೆಯಬೇಕಾದಲ್ಲಿ ಜನತೆ ಟ್ಯಾಕ್ಸ್ ತುಂಬಬೇಕು ಎನ್ನುತ್ತಿದ್ದಂತೆ ಒಂದು ಲಕ್ಷಕ್ಕೂ ಅಕ ಟ್ಯಾಕ್ಸ್ ಹಣ ಗ್ರಾಪಂಗೆ ಸಲ್ಲಿಕೆಯಾಗದೆ ದುರ್ಬಳಕೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಂತೆ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಾಪಂ ಇಒ ಭರವಸೆ ನೀಡಿದರು.
ಹಳೇ ಯೋಜನೆಗೆ ಹೊಸ ಬಣ್ಣ ಬಳಿಯಬೇಡಿ: ಗ್ರಾಮದ ಮುಖಂಡ ಗೌಡಪ್ಪಗೌಡ ಪಾಟೀಲ ಮೊದಲಿನ ಯೋಜನೆಗಳಿಗೆ ಆದರ್ಶ ಗ್ರಾಮ ಎಂದು ಬಣ್ಣ ಬಳಿಯುವುದು ಬೇಡ. ಯೋಜನೆಯಡಿ ಸಂಪೂರ್ಣ ಸಿಸಿ ರಸ್ತೆ, ಮಹಿಳೆಯರಿಗೆ ಶೌಚಗೃಹ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಗ್ರಾಮದಿಂದ ವಿವಿಧ ಸ್ಥಳೀಯ ಗ್ರಾಮಗಳು ಹಾಗೂ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸುಧಾರಣೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು. ಮುಖಂಡ ಗೋವಿಂದರಡ್ಡಿ ಜಾಯನ್ನವರ ಕಲುಷಿತ ನೀರು ಕುಡಿದು ಮೃತಪಟ್ಟ ಕುಟುಂಬಸ್ಥರಿಗೆ ಇನ್ನು ಪರಿಹಾರ ದೊರೆತಿಲ್ಲ. ಚರಂಡಿಯಲ್ಲಿ ಜೆಜೆಎಂ ಪೈಪ್‌ಲೈನ್ ಮಾಡಿದ್ದಾರೆ. ಅದನ್ನು ಸರಿಪಡಿಸಬೇಕು. ಕಲುಷಿತ ನೀರು ಕುಡಿದು ಎಷ್ಟೋ ಗ್ರಾಮಸ್ಥರಿಗೆ ಕಿಡ್ನಿ ಸಮಸ್ಯೆಯಾಗಿದೆ. ಅವರ ಆರೋಗ್ಯದ ವೆಚ್ಚ ಭರಿಸುವಲ್ಲಿ ಯಾರೊಬ್ಬ ರಾಜಕಾರಣಿಯಾಗಲಿ ಅಥವಾ ಅಕಾರಿಯಾಗಲಿ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಅಧ್ಯಕ್ಷ ಭೀಮಪ್ಪ ದೊಡಮನಿ, ಉಪಾಧ್ಯಕ್ಷೆ ಮಲ್ಲವ್ವ ಲಮಾಣಿ ಸೇರಿ ಎಲ್ಲ ಇಲಾಖೆ ಅಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net