

ತುಮಕೂರು : ಕರೊನಾ ಸೋಂಕಿತರ ಆರೈಕೆಗಾಗಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್‌ಗಳ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಪ್ರತೀ ಕೋವಿಡ್ ಕೇರ್ ಸೆಂಟರ್‌ಗಳಲ್ಲಿಯೂ ನೀರು, ಊಟದ ವ್ಯವಸ್ಥೆ ವ್ಯವಸ್ಥಿತವಾಗಿರಬೇಕು. ಕಾಲ ಕಾಲಕ್ಕೆ ಅನುಗುಣವಾಗಿ ಔಷಧಗಳನ್ನು ಕೊಡಬೇಕು, ಎಲ್ಲಿಯೂ ಯಾವುದೇ ಸಮಸ್ಯೆಯಾಗದಂತೆ ನಿಗಾವಹಿಸಬೇಕು ಎಂದರು.
ಅಗತ್ಯ ಇರುವ ಸೋಂಕಿತರಿಗೆ ಮಾತ್ರವೇ ಆಕ್ಸಿಜನ್ ನೀಡಬೇಕು, ಸೋಂಕಿತರು ಕೇಳುತ್ತಾರೆಂಬ ಕಾರಣಕ್ಕೆ ಆಕ್ಸಿಜನ್ ಕೊಡಬಾರದು, ವೈದ್ಯರು ಪರೀಕ್ಷಿಸಿ ಸೋಂಕಿತರಿಗೆ ಆಕ್ಸಿಜನ್ ನೀಡುವ ಅಗತ್ಯವಿದ್ದರೆ ಕೊಡಬೇಕು, ಅನಗತ್ಯವಾಗಿ ಯಾರಿಗೂ ಆಕ್ಸಿಜನ್ ಕೊಡಬಾರದು ಎಂದು ಸಲಹೆ ನೀಡಿದರು.
ಅಧಿಕಾರಿಗಳು ಸಮನ್ವಯ ಸಾಧಿಸಿ ಕರೊನಾ ನಿಯಂತ್ರಣಕ್ಕೆ ಶ್ರಮಿಸಬೇಕು, ಹಾಸಿಗೆ, ಆಮ್ಲಜನಕ ಕೊರತೆ ನೀಗಿಸಲು ಕೋವಿಡ್‌ಗೆ ಕಡಿವಾಣ ಹಾಕಲೇಬೇಕು. ಆಸ್ಪತ್ರೆಗಳಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ನರ್ಸ್‌ಗಳ ಮೇಲೆ ಬಿಡಬಾರದು. ತಮ್ಮ ಕೆಲಸವನ್ನು ತಾವೇ ಅಚ್ಚುಕಟ್ಟಾಗಿ ನಿಭಾಯಿಸಬೇಕು, ಯಾವುದೇ ಗೊಂದಲ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೋಂಕಿತರ ಆರೈಕೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಆಮ್ಲಜನಕದ ಸಾಂದ್ರಕಗಳನ್ನು ನೀಡಲಾಗುವುದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸೋಂಕಿತರಿಗೆ ಚಿಕಿತ್ಸೆ ನೀಡಬೇಕು. ಆಮ್ಲಜನಕ , ಹಾಸಿಗೆ ಕೊರತೆಯಾಗದಂತೆ ಕಾರ್ಯ ನಿರ್ವಹಿಸಬೇಕು, ಆಸ್ಪತ್ರೆಗಳಿಗೆ ದಾಖಲಾಗುವ ಸೋಂಕಿತರಿಗೆ ಚಿಕಿತ್ಸೆ ನೀಡುವ ಮತ್ತು ಡಿಸ್ಚಾರ್ಜ್ ಆಗುವ ಮಾಹಿತಿಯನ್ನು ನಿರ್ವಹಣೆ ಮಾಡಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಉಪವಿಭಾಗಾಧಿಕಾರಿ ಅಜಯ್, ಡಿಎಚ್‌ಒ ಡಾ.ನಾಗೇಂದ್ರಪ್ಪ ಮತ್ತಿತರರು ಇದ್ದರು.
ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೂ ಸೂಕ್ತವಾಗಿ ಚಿಕಿತ್ಸೆ ನೀಡುವುದರೊಂದಿಗೆ ಸದಾ ನಿಗಾವಹಿಸಬೇಕು. ವೈದ್ಯರಿಂದ ಕೋವಿಡ್ ಕಿಟ್ ಪಡೆದು ಅವುಗಳನ್ನು ಸೋಂಕಿತರಿಗೆ ನೀಡಬೇಕು. ಕೆ.ಚನ್ನಬಸಪ್ಪ ಅಪರ ಜಿಲ್ಲಾಧಿಕಾರಿ