

ಹಾಸನ:‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎನ್ನುವ ಕುವೆಂಪು ಅವರ ವಾಕ್ಯವನ್ನು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ರಾಜ್ಯದ ಶಾಲಾ- ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕ್ಷುಲ್ಲಕ ಕಾರಣ ಮುಂದಿಟ್ಟುಕೊಂಡು ಗೊಂದಲ ಸೃಷ್ಟಿಸುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸರಸ್ವತಿ, ಗಣಪತಿ ಮೊದಲಾದ ಧಾರ್ಮಿಕ ಪೂಜೆ ಮಾಡುವುದನ್ನು ನಿಷೇಧ ಮಾಡಿ ಗೊಂದಲ ಸೃಷ್ಟಿಸಿತ್ತು. ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಆ ಬಳಿಕ ಆದೇಶವನ್ನು ಹಿಂತೆಗೆದುಕೊಂಡಿದ್ದ ಸರ್ಕಾರ, ಈಗ ಪುನಃ ವಸತಿ ಶಾಲೆಗಳಲ್ಲಿ ಕುವೆಂಪು ಅವರ ವಾಕ್ಯ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎನ್ನುವ ಘೋಷಣೆಯನ್ನು ಬದಲಾವಣೆ ಮಾಡಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎನ್ನುವ ವಾಕ್ಯವನ್ನು ಹಾಕಿರುವ ಸರ್ಕಾರದ ನಡೆ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ವಿರೋಧಿ ನೀತಿಯನ್ನು ಅನುಸರಿಸುತ್ತಿರುವಂತೆ ಕಾಣುತ್ತಿದೆ. ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂದರೆ ಏನನ್ನು ಪ್ರಶ್ನಿಸಬೇಕು? ಶಾಲಾ- ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ, ವಿನಯತೆ, ವಿದ್ವತ್ ಪೂರ್ಣತೆಯಿಂದ ಕೂಡಿರಬೇಕೇ ವಿನಃ ಗೂಂಡಾ ಪ್ರವೃತ್ತಿಯಿಂದಲ್ಲ. ಹಾಗೊಂದು ವೇಳೆ ಧೈರ್ಯವಾಗಿ ಪ್ರಶ್ನಿಸು ಎನ್ನುವ ಸಾಲು ಬೇಕಿದ್ದರೆ ಭ್ರಷ್ಟ ಸಚಿವರ, ಅಧಿಕಾರಿ ವರ್ಗದವರ ಸರ್ಕಾರಿ ಕಚೇರಿಗಳಲ್ಲಿ ಹಾಕಿಸಿಕೊಳ್ಳಲಿ ಎಂದು ತಿಳಿಸಿದರು.
ಸದೃಢ, ಸೃಜನಶೀಲ ವಿದ್ಯಾರ್ಥಿಯಾಗಿ ರೂಪುಗೊಳ್ಳಲು ಪ್ರತಿಭೆ ಅವಶ್ಯಕ. ಹೀಗಾಗಿ ವಿಶ್ವಮಾನವ ಸಂದೇಶ ಸಾರಿರುವ ಕುವೆಂಪು ಅವರ ಸಾಲುಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಎಬಿವಿಪಿ ವಿಭಾಗದ ಸಂಚಾಲಕ ಗಿರೀಶ್, ಪದಾಧಿಕಾರಿಗಳಾದ ಸುಷ್ಮಿತಾ, ಚಂದನ, ಚಿರಂತ್, ಧ್ರುವಲತಾ, ತರುಣ್ ಇತರರು ಪಾಲ್ಗೊಂಡಿದ್ದರು.