ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನಕ್ಕೆ ಚಾಲನೆ

maadhwaa
Published on

ಹುಬ್ಬಳ್ಳಿ: ಅಖಿಲ ಭಾರತ ಮಾಧ್ವ ಮಹಾಮಂಡಲದ ವತಿಯಿಂದ ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್​ನಲ್ಲಿ ಆಯೋಜಿಸಿರುವ ಎರಡು ದಿನಗಳ 29ನೇ ಅಖಿಲ ಭಾರತ ಮಾಧ್ವ ತತ್ವ ಜ್ಞಾನ ಸಮ್ಮೇಳನ ಹಾಗೂ ಶ್ರೀಮನ್ ನ್ಯಾಯ ಸುಧಾ ಮಂಗಲೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಸಾನ್ನಿಧ್ಯ ವಹಿಸಿದ್ದ ಮಂತ್ರಾಲಯದ ಶ್ರೀ ರಾಘವೇಂದ್ತ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮಾತನಾಡಿ, ಮತಾಂತರ ಪ್ರಕ್ರಿಯೆಯು ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ. ಬೇರೆ ಬೇರೆ ಸಮಾಜದವರು ಮಾಧ್ವರ ಏಕತೆಗೆ ಅಡೆತಡೆ ಉಂಟು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸಮಗ್ರ ಮಾಧ್ವ ಸಮುದಾಯವು ಅಖಿಲ ಭಾರತ ಮಾಧ್ವ ಮಹಾಮಂಡಲದ ಜತೆ ಕೈಜೋಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಮಾತನಾಡಿದರು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರು, ಬನ್ನಂಜೆ ರಾಘವೇಂದ್ರ ತೀರ್ಥರು ಸಾನ್ನಿಧ್ಯ ವಹಿಸಿದ್ದರು

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ‘ಸೇವಾ ಹಿ ಪರಮೋಧರ್ಮ’ ವಿಷಯವಾಗಿ ಮಾತನಾಡಿ, ಸೇವೆಯ ಮಾರ್ಗ ಶ್ರೇಷ್ಠ ವಾದುದು. ಅದು ಪ್ರೇಮಕ್ಕೆ ಬಹಳ ಹತ್ತಿರ. ಇಂಗ್ಲಿಷ್​ನ ಸರ್ವೀಸ್​ಗೆ ಹಾಗೂ ಕನ್ನಡದ ಸೇವೆಗೆ ಬಹಳ ಭಿನ್ನತೆಯಿದೆ. ಸೇವೆ ಕೊಡುವ ಆನಂದವನ್ನು ಅನುಭವಿಸುವ ಅಗತ್ಯವಿದೆ ಎಂದರು.

ಇಂದು ಪ್ರತಿಯೊಂದು ರಾಷ್ಟ್ರವೂ ಹಾಗೂ ಜನಾಂಗವೂ ತನ್ನ ಅಂತಃ ಶಕ್ತಿಯತ್ತ ಗಮನ ಕೊಡುವ ಕಾಲ ಬಂದಿದೆ. ಭಾರತೀಯರು ಜಗತ್ತಿನ ಮೂಲೆ ಮೂಲೆಗೆ ತೆರಳಿ ಅಲ್ಲಿಯ ನೆಲವನ್ನು ಬೆಳಗಿದವರು. ಮಹಾಮಾರಿ ಕರೊನಾ ನಿಯಂತ್ರಣಕ್ಕೆ ಪ್ರತಿರೋಧಕ ಲಸಿಕೆಯನ್ನು ಕಂಡು ಹಿಡಿದ ಭಾರತವು ಬಡ ದೇಶಗಳಿಗೆ ವಿತರಿಸಿ ಸೇವೆಗೆ ಶ್ರೇಷ್ಠ ಅರ್ಥವನ್ನು ಕಲ್ಪಿಸಿದೆ. ಇಂದು ಭಾರತ ವಿಶ್ವ ಗೌರವಿಸುವ ಶ್ರೇಷ್ಠ ದೇಶವಾಗಿ ನಿಂತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net