ಅಖಾಡಕ್ಕೆ ಪೂಜೆ ಸಲ್ಲಿಸಿದ ಜಟ್ಟಿ

Published on

ಚಾಮರಾಜನಗರ: ವಿಜಯದಶಮಿ ದಿನದಂದು ನಡೆಯಲಿರುವ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುವ ಚಾಮರಾಜನಗರದ ನಾರಾಯಣ ಮಹೇಶ್ ಜಟ್ಟಿ ಮಂಗಳವಾರ ಪೂಜೆ ಸಲ್ಲಿಸಿದರು.

ನಗರದ ದೇವಾಂಗ ಬೀದಿಯಲ್ಲಿರುವ ಶ್ರೀನಿಂಬುಜಾದೇವಿ ದೇವಮಲ್ಲು ಜಟ್ಟಿಗಳ ದೊಡ್ಡ ಗರಡಿಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಗುರುಗಳಾದ ನಾರಾಯಣ ಜಟ್ಟಿ (ಪುಟ್ಟಣ್ಣ) ಅವರ ಮಾರ್ಗದರ್ಶನದಲ್ಲಿ ಕಸರತ್ತು ಅಭ್ಯಾಸ ಮಾಡಿದರು. ಇದೇ ವೇಳೆ ನಾರಾಯಣ ಮಹೇಶ್ ಜಟ್ಟಿ ಮಾತನಾಡಿ, ಎರಡನೇ ಬಾರಿಗೆ ದಸರಾ ವಜ್ರಮುಷ್ಠಿ ಕಾಳಗದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನಮ್ಮ ತಾತ, ತಂದೆ ಅವರಿಂದ ಬಳುವಳಿಯಾಗಿ ಬಂದಿರುವ ವಜ್ರಮುಷ್ಠಿ ಕಾಳಗ ಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ವಿಜಯದಶಮಿ ದಿನದಂದು ನಡೆಯಲಿರುವ ಕಾಳಗದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಹೇಳಿದರು. ನಾರಾಯಣ ಜಟ್ಟಿ(ಪುಟ್ಟಣ್ಣ) ಮಾತನಾಡಿ, ವಜ್ರಮುಷ್ಠಿ ಕಾಳಗದಲ್ಲಿ ಚಾಮರಾಜನಗರದ ಜಟ್ಟಿಗಳು ಭಾಗವಹಿಸುವುದು ಪರಂಪರೆಯಾಗಿದೆ. ಪ್ರತಿ ವರ್ಷ ಚಾಮರಾಜನಗರದ ಜಟ್ಟಿಯೊಬ್ಬರು ಕಾಳಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net