

ಮೈಸೂರು: ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಅಖಿಲ ನಾಮಧಾರಿಗೌಡ ನೌಕರರ ಸಂಘದ 18ನೇ ವಾರ್ಷಿಕ ಮಹಾ ಸಭೆಯನ್ನು ಸರಗೂರಿನ ನಾಮಧಾರಿಗೌಡ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಸಮಾಜದ ತಾಲೂಕು ಅಧ್ಯಕ್ಷ ಎಂ.ಎನ್.ಭೀಮ್‌ರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೌಕರರ ಸಂಘ ಮತ್ತು ಯುವಕರ ಸಂಘ ಸಮಾಜದ ಎರಡು ಕಣ್ಣುಗಳಿದ್ದಂತೆ. ಮಕ್ಕಳಿಗೆ ಆಸ್ತಿ ಮುಖ್ಯವಲ್ಲ. ವಿದ್ಯೆ ಕಲಿಸಿ ಸರಿಯಾದ ದಾರಿಯನ್ನು ತೋರಿಸಬೇಕು. ನಾವು ಈಗ ಕಲಿಸಿದ ಉತ್ತಮ ಸಂಸ್ಕಾರ ಮುಂದೆ ಅವರಿಗೆ ದಾರಿದೀಪವಾಗುತ್ತದೆ. ನಮ್ಮ ಸಮಾಜವನ್ನು ಒಬಿಸಿಗೆ ಸೇರಿಸಲು ಶ್ರಮಿಸೋಣ ಎಂದು ಕರೆನೀಡಿದರು.
ಬಡಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ಬಡತನದಿಂದ ಮುಂದೆ ಓದಲಾಗದ ಮಕ್ಕಳಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಕೆಲಸದಿಂದ ನಿವೃತ್ತರಾದ ನೌಕರರಿಗೆ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರವನ್ನು ಎ.ಅಂಕಪ್ಪ, ಬಹುಮಾನವನ್ನು ಕೆ.ಕೆಂಪರಾಜು ವಿತರಿಸಿದರು. ವೇದಿಕೆಯಲ್ಲಿ ನೌಕರರ ಸಂಘದ ಅಧ್ಯಕ್ಷ ಎಸ್.ನಾಗೇಂದ್ರ, ಉಪಾಧ್ಯಕ್ಷರಾದ ಎ.ಬಿ.ರಮೇಶ್, ಪ್ರಧಾನ ಕಾರ್ಯದರ್ಶಿ ಎ.ಪ್ರಸನ್ನ ಇತರರು ಇದ್ದರು.
ಕಾರ್ಯಕ್ರಮಕ್ಕೂ ಮೊದಲು ಸಂಘದ ಕುಟುಂಬದವರಿಗೆ ಆಟೋಟಗಳನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಕೆ.ವಿ.ರಾಘವೇಂದ್ರ ಮತ್ತು ಮಂಜುನಾಥ್ ನಡೆಸಿಕೊಟ್ಟರು. ಚಿರಾಶ್ರೀ ತಂಡ ಪ್ರಾರ್ಥನೆ ಮಾಡಿತು. ಶ್ರೀಪಾಲ್ ಕುಮಾರ್ ಸ್ವಾಗತಿಸಿದರು. ಲಲಿತಮ್ಮ ವಂದನಾರ್ಪಣೆ ಮಾಡಿದರು.