ಅಕ್ಷರದ ಜತೆ ಸಾಮಾನ್ಯ ಜ್ಞಾನ ಅವಶ್ಯಕ; ವಿಜ್ಞಾನಿ ಡಾ.ಲಕ್ಕಪ್ಪನ್​

PH 20
Published on

ಸೇಡಂ: ವಿದ್ಯಾರ್ಥಿಗಳು ಅಕ್ಷರಗಳನ್ನು ಕಲಿಯುವುದರ ಜತೆಗೆ ಸಾಮಾನ್ಯ ಜ್ಞಾನದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕ ಡಾ.ವಿನೋದ ಲಕ್ಕಪ್ಪನ್ ಹೇಳಿದರು.

ಅರಿವಿನ ಮಂಟಪದಲ್ಲಿ ವಿದ್ಯಾಭಾರತಿ ಹಾಗೂ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಎರಡು ದಿನಗಳ ಪ್ರಾಂತೀಯ ಗಣಿತ, ವಿಜ್ಞಾನ ಮೇಳ ಹಾಗೂ ಸಂಸ್ಕೃತಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಜ್ಞಾನ, ಗಣಿತ ವಿಷಯಗಳತ್ತ ಆಕರ್ಷಿಸಿ ಸಂಶೋಧನೆ ಕೈಗೊಳ್ಳಲು ಉತ್ತೇಜಿಸುವ ನಿಟ್ಟಿನಲ್ಲಿ ಮೇಳಗಳು ಪ್ರಯೋಜನಕಾರಿಯಾಗಿವೆ ಎಂದರು.

ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಂ.ವಿಜಯಕುಮಾರ ಮಾತನಾಡಿ, ಪ್ರಪಂಚಕ್ಕೆ ಸಂಶೋಧನೆಯ ಪರಿಕಲ್ಪನೆಯನ್ನು ನೀಡಿದ್ದು ಭಾರತ. ಪೂರ್ವಜರು ಮಹಾಭಾರತ ಹಾಗೂ ಭಗವದ್ಗೀತೆಗಳಲ್ಲಿಯೇ ವಿಜ್ಞಾನದ ಬಗ್ಗೆ ಉಲ್ಲೇಖಿಸಿದ್ದಾರೆ. ಹೀಗಾಗಿ ನಾವು ನಮ್ಮ ಪೂರ್ವಜರು ರಚಿಸಿದಂತಹ ಗ್ರಂಥಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು ಎಂದು ಕರೆ ನೀಡಿದರು.

ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಅಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿದರು. ಪ್ರಮುಖರಾದ ಮಹಿಪಾಲರೆಡ್ಡಿ ಪಾಟೀಲ್, ವಸಂತ ಮಾಧವ ಕಲ್ಲಡ್ಕ, ಪಿ. ಭೀಮರೆಡ್ಡಿ, ಡಾ.ರೂಪಾ ತಾಂಡೂರ, ಪ್ರೊ.ಎಸ್.ವಿ.ಹೊನ್ನುಂಗರ ಇತರರಿದ್ದರು. ಕಾಶಿನಾಥ ಮಡಿವಾಳ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ರಾಜು ಚೆನ್ನೀರ್ ನಿರೂಪಣೆ ಮಾಡಿದರು. ನಿಂಗಪ್ಪ ವಂದಿಸಿದರು.

ಮೇಳಕ್ಕೆ ಬಂದ ಮಕ್ಕಳಿಗೆ ಕೈತುತ್ತಿನ ಭೋಜನ: ಎರಡು ದಿನ ನಡೆಯುವ ಗಣಿತ-ವಿಜ್ಞಾನ ಮೇಳದಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಯಿಂದ ಸೇಡಂಗೆ ಆಗಮಿಸಿದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಥಳೀಯ ವಿದ್ಯಾರ್ಥಿಗಳ ತಾಯಂದಿರು ತಮ್ಮ ಮನೆಯಿಂದ ತಯಾರಿಸಿಕೊಂಡ ಬಂದಿದ್ದ ಊಟವನ್ನು ಕೈತುತ್ತಿನ ಮೂಲಕ ಬಡಿಸಿದರು. ಈ ಕ್ಷಣ ಇಡೀ ಕಾರ್ಯಕ್ರಮದಲ್ಲಿಯೇ ಸಾಕಷ್ಟು ವಿಶೇಷವೆನಿಸಿತು. ಬೇರೆಡೆಯಿಂದ ಬಂದ ಮಕ್ಕಳು ಕೈತುತ್ತು ತಿಂದು, ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net