ಅಕ್ಷರ ದೇಗುಲಕ್ಕಿಲ್ಲ ರಸ್ತೆ ಭಾಗ್ಯ

WhatsApp Image 2025-07-27 at 8.29.04 PM (2)
Published on

ಯಾದಗಿರಿ: ಶಾಲೆಗೆ ಹೋಗಿ ಬರಲು ರಸ್ತೆ ಮಾಡಿಸಿ ಇಲ್ಲವೇ ಮುಚ್ಚಿ ನಮ್ಮ ಅಭ್ಯಾಸಕ್ಕೆ ತಿಲಾಂಜಲಿ ಇಡಿ ಎಂದು ನಗರದ ಆರ್‌ಟಿಒ ಕಚೇರಿ ಪಕ್ಕದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದನ್ನು ಗಮನಿಸಿದರೆ ಜನಪ್ರತಿನಿಧಿಗಳು ಮತ್ತು ಸಂಬAಧಿತ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ.

ಇದು ಕೇವಲ ಒಂದು ಶಾಲೆ ಮಕ್ಕಳ ಆಕ್ರೋಶಭರಿತ ಮಾತಲ್ಲ. ಜಿಲ್ಲೆಯ ೧೬೩೯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಪೈಕಿ ಸುಮಾರು ೯೦೦ ಶಾಲೆಗಳಿಗೆ ಉತ್ತಮ ರಸ್ತೆ ಇಲ್ಲದೆ ಮಳೆಗಾಲದಲ್ಲಿ ಹೋಗಿ-ಬರಲು ಪರದಾಡುತ್ತಿರುವ ಮಕ್ಕಳು ಮತ್ತು ಶಿಕ್ಷಕರ ನಿತ್ಯದ ಗೋಳು ಇದಾಗಿದೆ. ಹೀಗಿದ್ದರೂ ಗ್ರಾಮ ಪಂಚಾಯಿತಿಯಿAದ ಹಿಡಿದು ಜಿಲ್ಲಾಡಳಿತವರೆಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಂದ ವಿಧಾನಸಭೆ ಮತ್ತು ಸಂಸತ್‌ಗೆ ಆಯ್ಕೆಯಾದವರ ಕಣ್ಣಿಗೆ ಈ ಸಮಸ್ಯೆ ಕಂಡಿಲ್ಲವೇ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ.

ಇನ್ನು ಈ ಶಾಲೆ ಬಗ್ಗೆ ಹೇಳುವುದಾದರೆ, ಮೊದಲು ನೇತಾಜಿ ಸರ್ಕಲ್ ಸಮೀಪದ ಸರ್ಕಾರಿ ಶಾಲೆ ಕಟ್ಟಡದಲ್ಲಿತ್ತು. ಮಕ್ಕಳ ಸಂಖ್ಯೆ ಹೆಚ್ಚಾಗಿ ಕಟ್ಟಡ ಚಿಕ್ಕದಾಗಿದ್ದರಿಂದ ಚಿತ್ತಾಪುರ ರಸ್ತೆಯ ಆರ್‌ಟಿಒ ಕಚೇರಿ ಪಕ್ಕ ಹೊಸ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಲಾಯಿತು. ಹೀಗೆ ಇಲ್ಲಿಂದ ಅಲ್ಲಿಗೆ ಹೋಗಿ ಸುಮಾರು ೧೨ ವರ್ಷವಾದರೂ ಮುಖ್ಯ ರಸ್ತೆಯಿಂದ ಶಾಲೆವರೆಗೆ ಅಂದರೆ ೭೦೦-೮೦೦ ಮೀಟರ್ ಗುಣಮಟ್ಟದ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ ಎಂದರೆ ಸಂಬAಧಿತರ ಕಾರ್ಯವೈಖರಿ ಹೇಗಿದೆ ಎಂಬುದನ್ನು ತೋರಿಸಿಕೊಡುತ್ತದೆ.

ನಗರ ಸೇರಿ ಸುತ್ತಲಿನ ಹತ್ತಾರು ಊರು ಮತ್ತು ತಾಂಡಾಗಳಿAದ ೫೦೦ಕ್ಕೂ ಅಧಿಕ ಮಕ್ಕಳು ಈ ಶಾಲೆಯಲ್ಲಿ ಅಭ್ಯಸಿಸುತ್ತಾರೆ. ಪಾಠ ಬೋಧನೆಗೆ ೩೦ಕ್ಕೂ ಅಧಿಕ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಇದ್ದಾರೆ. ವರ್ಷದ ಬೇರೆ ದಿನಗಳಲ್ಲಿ ಅಷ್ಟೇನು ಸಮಸ್ಯೆ ಕಾಣದಿದ್ದರೂ ಮಳೆಗಾಲ ಶುರುವಾಯಿತೆಂದರೆ ಮುಗಿಯುವವರೆಗೂ ನರಕಯಾತನೆ ಅನುಭವಿಸುವುದು ತಪ್ಪಿದ್ದಲ್ಲ.

ಶಾಲಾ ಕಟ್ಟಡವೇನೋ ಸರಿಯಾಗಿದ್ದು, ಪಾಠ ಬೋಧನೆಯೂ ಸರಿ ಇದೆ. ಆದರೆ ಕಲಿಯಲು ಮತ್ತು ಕಲಿಸಲು ಬರುವವರ ಈ ಗೋಳಿಗೆ ಮುಕ್ತಿ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಗದಂತಾಗಿದೆ.

೭೦೦-೮೦೦ ಮೀಟರ್ ಕಚ್ಚಾ ರಸ್ತೆಯಲ್ಲಿ ೨೦ಕ್ಕೂ ಹೆಚ್ಚು ತಗ್ಗುಗಳಿವೆ. ಕೆಲವೆಡೆಯಂತೂ ದೊಡ್ಡದಾದ ತಗ್ಗು ಬಿದ್ದಿದ್ದು, ಮೊಣಕಾಲು ಮಟ್ಟ ನೀರು ನಿಲ್ಲುತ್ತದೆ. ವಾಹನ ಚಾಲಕರು ಕ್ಷಣಕಾಲ ಮೈಮರೆತರೂ ಪಲ್ಟಿ ಹೊಡೆದು ಮೈ-ಕೈ ಗಾಯ ಮಾಡಿಕೊಳ್ಳುವುದು ಗ್ಯಾರಂಟಿ. ಇನ್ನು ನಡೆದುಕೊಂಡು ಹೋಗುವವರು ಜೀವ ಕೈಯಲ್ಲಿ ಹಿಡಿದು ಮೈತುಂಬ ಕಣ್ಣಾಗಿಸಿಕೊಂಡೇ ಹೆಜ್ಜೆ ಇಡಬೇಕು. ತಪ್ಪಿದರೆ ಈ ಹೊಂಡದಲ್ಲಿ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ. ಹೀಗಿದೆ ಸರ್ಕಾರಿ ಶಾಲೆಯ ಕಥೆ-ವ್ಯಥೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net