

ಹಾಸನ: ಅಕ್ಷರ ಕಲಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡುತ್ತಿದ್ದು, ಇದರ ಜತೆಗೆ ಸಂಘಟನೆಗಳು, ಎಲ್ಲಾ ಸಂಘ-ಸಂಸ್ಥೆಗಳು ಕೈಜೋಡಿಸಿ ಅಕ್ಷರ ಕಲಿತವರು ಕಲಿಯದವರಿಗೆ ಕಲಿಸುವ ಮೂಲಕ ಸಂಪೂರ್ಣ ಸಾಕ್ಷರತೆಗೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಕರೆ ನೀಡಿದರು.
ನಗರದ ಡಿಸಿ ಕಚೇರಿ ಬಳಿ ಇರುವ ವಾರ್ತಾ ಭವನದ ಆವರಣದಲ್ಲಿ ಲೋಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಸಾಕ್ಷರತ ಸಮಿತಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಹಾಗೂ ಸಾಕ್ಷರತಾ ಪ್ರಮಾಣವಚನ ಬೋಧಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಇರುವ ಅನಕ್ಷರಸ್ಥರನ್ನು ಗುರುತಿಸುವ ಕೆಲಸ ಪ್ರಾರಂಭವಾಗಲಿದೆ. ಈ ಬಗ್ಗೆ ಸಿದ್ಧತಾ ಸಭೆಗಳು ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಶೇ.80 ರಷ್ಟಿದೆ ಎಂದು ಅಂದಾಜು ಮಾಡಲಾಗಿದೆ. ರಾಜ್ಯದಲ್ಲೂ ಕೂಡ ಶೇ.80 ಇರಬಹುದು ಎಂದು ತಿಳಿಸಿದರು.
ಈ ಜಿಲ್ಲೆಯಲ್ಲಿ ಇರುವ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಕೆಲಸವನ್ನು ನಮ್ಮ ಇಲಾಖೆಯಿಂದ ಮಾಡಲಾಗುವುದು. ಎಲ್ಲರೂ ಕಟಿಬದ್ಧರಾಗಿ ಯಾರ‌್ಯಾರು ಇನ್ನು ಅಕ್ಷರವನ್ನು ಕಲಿತಿಲ್ಲದ್ದವರ ಮಾಹಿತಿ ಸಂಗ್ರಹಿಸಿ. ಅಕ್ಷರ ಕಲಿಯದವರಲ್ಲಿ ಇನ್ನು ಕೂಡ ಮೂಢ ನಂಬಿಕೆಗಳು, ಅಂಧಕಾರದಲ್ಲಿ ಇರುತ್ತದೆ. ಇವುಗಳನ್ನು ಹೋಗಲಾಡಿಸಲು ನಾವು ಅಕ್ಷರ ಕಲಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಸ್ತುತ ಜನಾಂಗ ಎಲ್ಲರೂ ವಿದ್ಯೆ ಕಲಿಯುತ್ತಿದ್ದಾರೆ. ಆದರೆ ಇಷ್ಟು ಮಾತ್ರ ಸಾಕಾಗುವುದಿಲ್ಲ. ಶಿಕ್ಷಣ ಧೈರ್ಯ, ದೃಢತೆ, ಬದ್ಧತೆ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದೆ. ಅಕ್ಷರ ಕಲಿಯುವುದರ ಜತೆಗೆ ಉತ್ತಮ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು. ನಮ್ಮ ಹಾಸನ ಜಿಲ್ಲೆಯಲ್ಲಿ ಇನ್ನು ಯಾರೆಲ್ಲಾ ಅನಕ್ಷರಸ್ಥರಿದ್ದಾರೆ ಅವರಿಗೆ ನಾವು ಕಲಿಸುವ ಪ್ರಯತ್ನ ಮಾಡೋಣ. ಎಲ್ಲರೂ ಕೂಡ ಇದರಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮಾ ಮಾತನಾಡಿ, ರಾಜ್ಯದಲ್ಲಿ ಒಟ್ಟಾರೆ ಶೇ. 77.27 ಸಾಕ್ಷರತೆ ಪ್ರಮಾಣ ಹೊಂದಿದೆ. 1978-79ರಲ್ಲಿ ಸಾಕ್ಷರತಾ ಆಂದೋಲನ ಪ್ರಾರಂಭವಾಗಿದ್ದು, ಈ ವರ್ಷ ನಾವು 30 ಸಾವಿರ ಜನರಿಗೆ ಹಾಸನ ಜಿಲ್ಲೆಯಲ್ಲಿ ಸಾಕ್ಷರತೆಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಅವರೆಲ್ಲ ಇಂದು ಸಾಕ್ಷರರಾಗಿದ್ದಾರೆ. ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು 223 ಜನರನ್ನು ಅಕ್ಷರ ಕಲಿಯುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಒಟ್ಟು 30 ಸಾವಿರ ಜನರಿಗೆ ಅಕ್ಷರ ಜ್ಞಾನವನ್ನು ನೀಡಿದ್ದೇವೆ. ಇದು ಪ್ರತಿ ವರ್ಷ ನಡೆಯುತ್ತಿದೆ. 2022 ರಿಂದ 2027ರವರೆಗೆ ಇಡೀ ಭಾರತದಲ್ಲಿ ಎಲ್ಲರನ್ನು ಸಾಕ್ಷರರನ್ನಾಗಿ ಮಾಡುವ ಆಂದೋಲನ ಇದು. ಇದರಲ್ಲಿ ನಾವು ಯಶಸ್ವಿಗೊಳಿಸೋಣ. 2027ರ ಒಳಗೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ಸಾಕ್ಷರರಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಸಾಕ್ಷರತೆಯ ಹಾಡನ್ನು ಹಾಡಿದರು.
ಕಾರ್ಯಕ್ರಮದಲ್ಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕಿ ಮೀನಾಕ್ಷಮ್ಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಎಸ್.ಎಸ್. ಪಾಷಾ, ಶಬ್ಬೀರ್ ಅಹಮದ್, ಬಿ.ಟಿ. ಮಾನವ ಸೇರಿದಂತೆ ಇತರರು ಉಪಸ್ಥಿತರಿದ್ದರು.