ಅಕ್ಷಯಾ ತೃತೀಯಾದ ಚಿನ್ನದ ವಹಿವಾಟಿನೆಡೆ ಕುತೂಹಲ

Gold Bar
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಚಿನ್ನದ ದರ ಆಕಾಶ ತಲುಪಲು ಹವಣಿಸುತ್ತಿದ್ದರೆ, ಬೆಳ್ಳಿಯೂ ನಾನೇನೂ ಕಡಿಮೆ ಇಲ್ಲವೆಂದು ಬಂಗಾರದ ಜತೆ ಪೈಪೋಟಿ ನಡೆಸುತ್ತಿರುವ ಈ ಸಂದರ್ಭದಲ್ಲಿ ಏ.30ರ ಅಕ್ಷಯ ತೃತೀಯದಂದು ನಡೆಯಲಿರುವ ಚಿನ್ನ-ಬೆಳ್ಳಿಯ ವಹಿವಾಟಿನ ಕುರಿತಂತೆ ಕುತೂಹಲ ಮೂಡಿಸಿದೆ.

ಹತ್ತು ಗ್ರಾಂ.ಒಂದು ಲಕ್ಷ ರೂ.ಗಳ ಗಡಿದಾಟಿದ್ದ ಪರಿಶುದ್ಧ ಚಿನ್ನದ ದರದಲ್ಲಿ ಈಗ್ಗೆ ಕೆಲ ದಿನಗಳಿಂದ ಅಲ್ಪ ಪ್ರಮಾಣದಲ್ಲಿ ಹಾಗೂ ಒಂದು ಲಕ್ಷ ರೂ.ಗೆ ತಲುಪಿದ್ದ ಒಂದು ಕೆಜಿ ಬೆಳ್ಳಿ ದರದಲ್ಲೂ ಸೋಮವಾರಕ್ಕೆ ಕಂಡಂತೆ ಕೊಂಚ ಇಳಿಕೆಯಾಗಿದೆ. ಪರಿಶುದ್ಧ ಚಿನ್ನ(99.9ರಷ್ಟು ಶುದ್ಧತೆ)10 ಗ್ರಾಂಗೆ 98400 ರೂ.ಗೆ, ಆಭರಣಚಿನ್ನ (99.5ಶುದ್ಧತೆ)10 ಗ್ರಾಂ.ಗೆ 97900 ರೂ.ಹಾಗೂ ಒಂದು ಕೆಜಿ ಬೆಳ್ಳಿ ದರ 98500 ರೂ.ಗೆ ಇಳಿದಿದೆ.

ಅಕ್ಷಯ ತೃತೀಯಾದಂದು ಚಿನ್ನ-ಬೆಳ್ಳಿ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬುದೊಂದು ನಂಬಿಕೆ. ಇದಕ್ಕೆ ಅನುಗುಣವಾಗಿ ರಿಯಾಯಿತಿ, ಉಡುಗೊರೆಗಳ ಘೋಷಣೆಯೊಂದಿಗೆ ಶುಭ ಸಂದರ್ಭದಲ್ಲಿ ಖರೀದಿಸುವಂತೆ ಗ್ರಾಹಕರನ್ನು ಆಕರ್ಷಿಸಲು ವರ್ತಕರು ಮುಂದಾಗಿದ್ದಾರೆ.

ಗ್ರಾಹಕರಿಗೆ ಮನವೊಪ್ಪುವ ಕಡಿಮೆ ತೂಕದ ಅತ್ಯಾಕರ್ಷಕ ಒಡವೆಗಳನ್ನು ಸಿದ್ಧಪಡಿಸಿ ಮಾರಾಟಕ್ಕೂ ಕಸರತ್ತು ನಡೆಸಲಾಗಿದೆ. ಆದರೆ, ದರದ ನಾಗಲೋಟದಿಂದಾಗಿ ಅಕ್ಷಯ ತೃತೀಯಾಕ್ಕೆ ಬಂಗಾರ ಖರೀದಿಸುವುದು ಹೇಗೆಂಬ ಚರ್ಚೆಯ ನಡುವೆ ಚಿನ್ನಾಭರಣ, ಪರಿಶುದ್ಧ ಚಿನ್ನ, ಬೆಳ್ಳಿ ನಾಣ್ಯಗಳ ಖರೀದಿಗೆ ಆಭರಣ ಮಳಿಗೆಗಳಲ್ಲಿ ಬುಕ್ಕಿಂಗ್ ನಡೆಯುತ್ತಿವೆ.

ಆದರೆ, ಬುಕ್ಕಿಂಗ್ ಒಂದು ದಿನ ತಡವಾದರೂ ಸಾವಿರಾರು ರೂ. ಏರಿಕೆ ಅಥವಾ ಕೊಂಚ ಇಳಿಕೆ ಕಾಣುತ್ತಿರುವುದು ಗ್ರಾಹಕರನ್ನು ಗೊಂದಲಕ್ಕೆ ದೂಡುತ್ತಿದೆ. ದರ ಏರಿಕೆಯಿಂದಾಗಿ ಒಂದು ವೇಳೆ ಖರೀದಿಸುವ ಬಂಗಾರ-ಬೆಳ್ಳಿಯ ಪ್ರಮಾಣ ಕಡಿಮೆಯಾಗ ಬಹು ದಾದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗದು. ಖರೀದಿ ಉತ್ಸಾಹ ಇದ್ದೇ ಇರುತ್ತದೆ ಎನ್ನುತ್ತಾರೆ ಚಿನ್ನಾಭರಣ ಶೋರೂಂವೊಂದರ ವ್ಯವಸ್ಥಾಪಕರು.

ಈಚೆಗೆ ಚಿನ್ನದ ದರ ಕುಸಿಯುತ್ತದೆ ಎಂಬ ಸುದ್ದಿ ಹರಿದಾಡಿದ್ದರಿಂದ ಮೂರ‌್ನಾಲ್ಕು ದಿನಗಳ ಕಾಲ ಗ್ರಾಹಕರು ಕೊಂಚ ವಿಚಲಿತರಾ ಗಿದ್ದರು. ಆದರೆ, ನಿರಂತರ ದರ ಏರಿಕೆಯಾಗುತ್ತಲೇ ಇದೆ. ಸಾಧ್ಯವಾದಷ್ಟು ಹಣ ಕ್ರೋಡೀಕರಿಸಿಕೊಂಡು ಗ್ರಾಹಕರು ಚಿನ್ನಾಭರಣ ಖರೀದಿಗೆ ಮುಂದಾಗುತ್ತಿದ್ದಾರೆ. ಕಳೆದ ಅಕ್ಷಯ ತೃತೀಯಾಕ್ಕೂ ಈ ವರ್ಷಕ್ಕೂ 10 ಗ್ರಾಂ. ಶುದ್ಧ ಚಿನ್ನದ ದರದಲ್ಲಿ ಅಂದಾಜು 25 ಸಾವಿರ ರೂ. ಅಧಿಕವಾಗಿದೆ. ಆದರೂ ಖರೀದಿಸಲಿದ್ದಾರೆ ಎಂದು ಚಿನ್ನಾಭರಣ ವರ್ತಕರೊಬ್ಬರು ಹೇಳಿದರು. ಅವರ ಧ್ವನಿಯಲ್ಲಿ ಅಕ್ಷಯ ತೃತೀಯಾ ವಹಿವಾಟು ಕಳೆಗಟ್ಟುವ ವಿಶ್ವಾಸ ಕಂಡುಬಂತು.

ಬಂಗಾರದ ಧಾರಣೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಗ್ರಾಹಕರು ಕೊಂಚ ಯೋಚಿಸುವುದು ಸಹಜ. ಮದುವೆ ಮತ್ತಿತರ ಶುಭಕಾರ್ಯಗಳ ಕಾರಣಕ್ಕೆ ಖರೀದಿ ಇದ್ದೇ ಇರುತ್ತದೆ ಎನ್ನುತ್ತಾರೆ ದಾವಣಗೆರೆ ಚಿನ್ನಾಭರಣದ ವ್ಯಾಪಾರಿಯೊಬ್ಬರು.

ಪಾಲಕರಿಗೆ ಹೊರೆ: ಮದುವೆ ಮಹೂರ್ತಗಳು ನಿಗದಿಯಾಗುತ್ತಿದ್ದಂತೆ ಮೊದಲೇ ಚಿನ್ನ ಖರೀದಿಸಿದವರು ನಿರಾಳರಾಗಿದ್ದರೆ, ಈಚೆಗೆ ಖರೀದಿಗೆ ಮುಂದಾಗುವವರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಮದುವೆ ಖರ್ಚಿನ ಬಾಬ್ತಿನಲ್ಲಿ ಚಿನ್ನ-ಬೆಳ್ಳಿಯ ವೆಚ್ಚವೂ ಅಧಿಕವಾಗುತ್ತಿರುವುದು ಪಾಲಕರನ್ನು ಕಂಗೆಡುವಂತೆ ಮಾಡುತ್ತಿದೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net