

ಆನೇಕಲ್: ವೈದ್ಯರು, ಮನುಷ್ಯರ ತೀವ್ರ ಒತ್ತಡ ಕಡಿಮೆ ಮಾಡಲು ಜಪಾನ್ ಮಾದರಿಯಲ್ಲಿ ಜಿನ್‌ಟೆಕ್ ಹೆಸರಿನ ಅಕ್ವಾ ರೂಮ್ಸ್ ಆಯುರ್ವೇದಿಕ್ ಅನ್ನು ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಗೋಲ್ಡ್ ಕಾಯಿನ್ ಕ್ಲಬ್ ಹಾಗೂ ರೆಸಾರ್ಟ್‌ನಲ್ಲಿ ದಯಾನಂದ ಫೌಂಡೇಷನ್ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗಿದೆ.
ಔಷಧ ಇಲ್ಲದೆ 15 ದಿನಗಳಲ್ಲಿ ನೈಸರ್ಗಿಕವಾಗಿ ಗುಣ ಮಾಡುವ ವಿಧಾನವನ್ನು ಗೋಲ್ಡ್ ಕಾಯಿನ್ ಕ್ಲಬ್ ಅನ್ವೇಷಿಸಿದೆ.
ಪ್ರಕೃತಿಯ ನಡುವೆ ಜಪಾನ್ ಮಾದರಿಯಲ್ಲಿ ಜೆನ್‌ಟೆಕ್ ಹೆಸರಿನ ವಿಶೇಷ ಬೃಹತ್ ಅಕ್ವೇರಿಯಂನಲ್ಲಿ ಇರುವಂತಹ ಮೀನುಗಳ ಎದುರು ಬೆಳಗಿನ ಸಮಯದಲ್ಲಿ ಕೂತರೆ ಯಾವುದೇ ಔಷಧ ಇಲ್ಲದೆಯೇ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ಪ್ರತಿ ಕೊಠಡಿಗಳು ಪರಸರಸ್ನೇಹಿಯಾಗಿದ್ದು, ಮರದ ಹಲಗೆಗಳಲ್ಲಿ ನಿರ್ಮಾಣಗೊಂಡಿವೆ. ಛಾವಣಿಯನ್ನು ಸಂಪೂರ್ಣ ಗ್ಲಾಸ್‌ನಿಂದ ಮುಚ್ಚಲಾಗಿದ್ದು, ಮಧ್ಯಭಾಗದಲ್ಲಿ ಪರದೆ ತೆರೆಯಲು ಹಾಗೂ ಮುಚ್ಚಲು ವ್ಯವಸ್ಥೆ ಮಾಡಲಾಗಿದೆ. ಮುಂಜಾನೆ ಸಮಯದಲ್ಲಿ ಮಲಗಿದ್ದರೆ ಸೂರ್ಯನ ಕಿರಣಗಳು ಮನುಷ್ಯನ ಮೇಲೆ ಬಿದ್ದು ಆರೋಗ್ಯವಂತರಾಗಲು ಸಹಕರಿಸುತ್ತದೆ.
ವೈದ್ಯರಿಗೆ ಎರಡು ದಿನದ ರಿಟ್ರೀಟ್ ಕಾರ್ಯಾಗಾರ: ಕರೊನಾ ಅವಧಿಯಲ್ಲಿ ವೈದ್ಯರು ಅವಿರತ ಶ್ರಮಿಸಿ ಕೋಟ್ಯಂತರ ಜನರ ಪ್ರಾಣ ಕಾಪಾಡಿದ್ದಾರೆ. ಅವರು ಬಹಳ ಒತ್ತಡದಲ್ಲಿ ಇರುವುದರಿಂದ ರಿಟ್ರೀಟ್ ಕಾರ್ಯಾಗಾರ ಆಯೋಜಿಸಿ ಮಾನಸಿಕ ಕ್ಲೀಷೆ ನಿವಾರಿಸಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಆಸ್ಪತ್ರೆಯ 15ಕ್ಕೂ ಹೆಚ್ಚು ವೈದ್ಯರು ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿ, ಇಲ್ಲಿನ ಪ್ರಕೃತಿ ಹಾಗೂ ಆಹಾರ ಪದ್ಧತಿಯನ್ನು ಮೆಚ್ಚಿಕೊಂಡಿದ್ದಾರೆ.
ವೈದ್ಯರು ಒತ್ತಡದಿಂದ ಹೊರಬರಬೇಕು: ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ವೈದ್ಯರೂ ಸಹ ಬಹಳಷ್ಟು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಆರೋಗ್ಯವಾಗಿದ್ದರೆ ಲಕ್ಷಾಂತರ ಮಂದಿಯ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಾಡಲಾಗಿರುವ ಈ ಪ್ರಯೋಗ ಯಶಸ್ವಿಯಾಗಿದೆ.
ಏನಿದು ಅಕ್ವಾ ರೂಮ್ಸ್: ಪ್ರಕೃತಿಯ ನಡುವೆ ನಿರ್ಮಿಸಲಾದ ಕೊಠಡಿಯಲ್ಲಿ ಬಾಗಿಲು ತೆರೆದಾಗ 100/25 ಚದರಡಿ ಅಳತೆಯ ಬೃಹತ್ ಅಕ್ವೇರಿಯಂನಲ್ಲಿ ಸಾವಿರಾರು ಮೀನುಗಳು ಕಾಣುತ್ತವೆ. ಮೀನುಗಳನ್ನು ನೋಡುವಾಗ ಬರುವ ಎನರ್ಜಿಯಿಂದ ಮನುಷ್ಯನಲ್ಲಿ ಸಕಾರಾತ್ಮಕ ಶಕ್ತಿ ಧೃವಿಸುತ್ತದೆ. ಇದನ್ನು ಜಪಾನ್‌ನಲ್ಲಿ ಸಾಕಷ್ಟು ಜನ ಮಾಡುತ್ತಾರೆ. ನಮ್ಮ ದೇಶದಲ್ಲಿ ಇಂಥ ಪ್ರಯೋಗ ಇದೇ ಮೊದಲು ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಜಿನ್‌ಟೆಕ್ ಆರೋಗ್ಯ ರಕ್ಷಣೆಯ ತಂತ್ರ: ಈ ಯೋಜನೆಯ ಹಿಂದೆ ಹಣ ಮಾಡುವ ಉದ್ದೇಶವಿಲ್ಲ. ಬದಲಾಗಿ ಪರಿಸರ ಹಾಗೂ ಪ್ರಕೃತಿಯಿಂದ ನಮಗೆ ಸಿಗುವ ಶಕ್ತಿಯನ್ನು ಉತ್ತಮ ಆರೋಗ್ಯ ಹೊಂದುವಂತೆ ಮಾಡುವ ಉದ್ದೇಶ ಇದರದ್ದಾಗಿದೆ. ಜಪಾನ್ ಮಾದರಿಯ ಜಿನ್‌ಟೆಕ್ ಹೆಸರಿನಲ್ಲಿ ವಿಭಿನ್ನವಾಗಿ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ 14 ದಿನ ನೆಲೆಸಿದರೆ, ಯಾವುದೇ ಔಷಧ ಇಲ್ಲದೆಯೇ ಮಧುಮೇಹದಿಂದಲೂ ಮುಕ್ತಿ ಪಡೆಯಬಹುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಟಿ ದಯಾನಂದ್ ರೆಡ್ಡಿ ಹೇಳಿದರು.
ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದ ವೈಶಿಷ್ಟ್ಯತೆಯೊಂದಿಗೆ ಇದನ್ನು ರೂಪಿಸಲಾಗಿದೆ. ಕರೊನಾ ಸಂದರ್ಭದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ ವೈದ್ಯರು ಸದುಪಯೋಗಪಡಿಸಿಕೊಳ್ಳಲಿ ಎಂದು ಎರಡು ದಿನಗಳಿಂದ ಅವರಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು ಎಂದು ವಿವರಿಸಿದರು.
15 ತಿಂಗಳಿಂದ ಹೋಂ ಐಸೋಲೇಷನ್: ಕರೊನಾ ಸೋಂಕಿತರು 15 ದಿನ ಹೊಂ ಐಸೋಲೇಷನ್ ಆದರೆ, ವೈದ್ಯರು 15 ತಿಂಗಳಿಂದ ಆಸ್ಪತ್ರೆಯಲ್ಲೇ ಜೀವನ ಕಳೆದಿದ್ದಾರೆ. ಇವರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಕೂಡ ರೆಸ್ಟ್ ಬೇಕು. ಈ ಕೇಂದ್ರಕ್ಕೆ ಬಂದು ಅವರೆಲ್ಲರೂ ನಿರಾಳರಾಗಿದ್ದಾರೆ ಎಂದು ದಯಾನಂದ ರೆಡ್ಡಿ ತಿಳಿಸಿದರು.
ನಾನು ಕಳೆದ ವರ್ಷವಷ್ಟೇ ವೈದ್ಯ ವೃತ್ತಿ ಆರಂಭಿಸಿದ್ದೇನೆ. 12 ತಿಂಗಳಿಂದ ಬಹಳಷ್ಟು ಒತ್ತಡದಲ್ಲಿದ್ದೆ. ಆದರೆ, ಎರಡು ದಿನದಿಂದ ಇಲ್ಲಿನ ತಂಪಾದ ವಾತಾವರಣ, ಗಾಳಿ, ಬೆಳಗಿನ ಸಮಯದಲ್ಲಿ ಪಕ್ಷಿಗಳ ಕಲರವ ಕೇಳುವುದೇ ಒಂದು ಆನಂದ. ನಾವು ರೂಮಿನಲ್ಲಿ ಮಲಗಿದ್ದರೂ, ಸೂರ್ಯನ ಕಿರಣಗಳು ನಮ್ಮ ಮೇಲೆ ಬೀಳುತ್ತವೆ. ಇದರಿಂದ ಆರೋಗ್ಯ ವೃದ್ಧಿಸುತ್ತದೆ. ಅಕ್ವಾ ರೂಮ್ಸ್ ಎಂಬ ವಿಶೇಷ ಮಾದರಿಯಲ್ಲಿ ಮೀನುಗಳನ್ನು ನೋಡುವುದೇ ಒಂದು ಸಂತೋಷ. ದೀಪಕ್, ವೈದ್ಯ ನಮಗೆ ಒತ್ತಡ ಅನಿಸಿದಾಗಲೆಲ್ಲ ಇಲ್ಲಿಗೆ ಬರಬಹುದು. ನನ್ನ ವೃತ್ತಿ ಬಾಂಧವರೂ ಸಹ ಒತ್ತಡದಲ್ಲಿ ಇದ್ದಾರೆ ಎಂದು ಅವರನ್ನೂ ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ಇಲ್ಲಿನ ವಾತಾವರಣ, ಅಂದ ಚಂದವನ್ನು ನೋಡಿ ಸ್ನೇಹಿತರು ಬಹಳಷ್ಟು ಸಂತೋಷಪಟ್ಟಿದ್ದಾರೆ. ಐಶ್ವರ್ಯ, ವೈದ್ಯೆ ಬೆಂಗಳೂರು ಗ್ರೀನ್ ಸಿಟಿ ಹೋಗಿ ಈಗ ಕಾಂಕ್ರೀಟ್ ಸಿಟಿಯಾಗಿದೆ. ಬೆಂಗಳೂರು ನಗರ ಹೆಚ್ಚು ಮಲಿನಗೊಂಡಿದ್ದು, ತಿಂಗಳಿಗೊಮ್ಮೆಯಾದರೂ ಇಲ್ಲಿಗೆ ಬರಬೇಕು ಎಂದು ನಿರ್ಧರಿಸಿದ್ದೇನೆ. ಇಲ್ಲಿನ ವಾತಾವರಣದಲ್ಲಿ ಪಕ್ಷಿಗಳ ಕಲರವದಿಂದಾಗಿ ಯಾವುದೋ ಕಾಡಿಗೆ ಬಂದ ಅನುಭವವಾಗುತ್ತದೆ. ಪ್ರಿಯಾಂಕಾ, ವೈದ್ಯೆ