ಅಕ್ರಮ‌ ಸಂಬಂಧಕ್ಕೆ ಜನಿಸಿದ ಮಗುವನ್ನು ಆಸ್ಪತ್ರೆಯಲ್ಲೆ ಬಿಟ್ಟು ಹೋದ ತಾಯಿ, ಅನಾಥವಾದ ಮಗುವಿಗೆ ಆಸ್ಪತ್ರೆಯಲ್ಲಿ ಆರೈಕೆ

IMG-20200116-WA0010.jpg
Published on

ಅರಕಲಗೂಡು: ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ಬುಧವಾರ ರಾತ್ರಿ ವಿಧವೆ ಮಹಿಳೆಯೊಬ್ಬರು ಅಕ್ರಮ ಸಂಬಂಧದಿಂದ ಹೆತ್ತ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಕಿಟಕಿ ಹಾರಿ ಹೊರ ಹೋಗಿದ್ದಾರೆ.

ತಾಲೂಕಿನ ಗ್ರಾಮವೊಂದರ ಗರ್ಭಿಣಿಯಾಗಿದ್ದ ವಿಧವೆ ಮಹಿಳೆಗೆ ಶನಿವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡು ಬಸವಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ತಡರಾತ್ರಿ ವೇಳೆಗೆ ಆಕೆ ಹೆಣ್ಣು ಮಗುವಿಗೆ ಜನ್ಮ‌ನೀಡಿದ್ದರು.

ಮಹಿಳೆಯ ಪತಿ ಸತ್ತು ೧೦ ವರ್ಷ ಕಳೆದಿದ್ದು. ಈಕೆಗೆ ೧೦ ವರ್ಷದ ಗಂಡು ಮಗನಿದ್ದಾನೆ. ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ಕಾರಣಕ್ಕಾಗಿ ಹೆತ್ತ ಮಗು ಮತ್ತು ಬಾಣಂತಿಯನ್ನು ಯಾರೊಬ್ಬರೂ ಕರೆದುಕೊಂಡು ಹೋಗಲು ಬಂದಿರಲಿಲ್ಲ.

ಹೀಗಾಗಿ ಸೋಮವಾರ ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ಊರಿಗೆ ಕರೆದೊಯ್ದಿದ್ದಾರೆ. ಆದರೆ ಆಕೆ ತನ್ನ ಮನೆಯನ್ನು ಸಿಬ್ಬಂದಿಗೆ ತೋರಿಸಿಲ್ಲ, ಊರಿನಲ್ಲಿದ್ದರೆ ನನಗೆ ತೊಂದರೆಯಾಗಲಿದೆ ಎಂದಿದ್ದರಿಂದ ಸಿಬ್ಬಂದಿ ವಾಪಾಸ್ಸು ಆಸ್ಪತ್ರೆಗೆ ಕರೆ ತಂದಿದ್ದಾರೆ.

ಈ ನಡುವೆ ಆಕೆ ಆಸ್ಪತ್ರೆ ವಾರ್ಡ್ ನಲ್ಲಿ ಮಗುವನ್ನು ಬಿಟ್ಟು ಬುಧವಾರ ರಾತ್ರಿ ಕಿಟಕಿ ಗಾಜು ಒಡೆದು ಪರಾರಿಯಾಗಿದ್ದಾರೆ.

ಘಟನೆ ಕುರಿತು ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಜೇಶ್ ಕೊಣನೂರು ಪೊಲೀಸರಿಗೆ ವಿಷಯ ತಿಳಿಸಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆಕೆ ಸ್ವಲ್ಪ ಮಾನಸಿಕ ಅಸ್ವಸ್ಥಳಾಗಿದ್ದು ಆಸ್ಪತ್ರೆಯಲ್ಲಿ ಚೆನ್ನಾಗಿ ಆರೈಕೆ ಮಾಡಲಾಗುತ್ತಿತ್ತು, ಸಿಬ್ಬಂದಿ ಕಾವಲು ಕೂಡ ಹಾಕಲಾಗಿತ್ತು. ಬೆಳಗಿನ ಜಾವ ಮಗು ಬಿಟ್ಟು ಪರಾರಿಯಾಗಿದ್ದಾಳೆ ಎಂದು ಡಾ. ರಾಜೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net