

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ 50-50 ಅನುಪಾತದಡಿ ಅಕ್ರಮವಾಗಿ ನೀಡಲಾಗಿರುವ ನಿವೇಶನಗಳ ಆದೇಶವನ್ನು ರದ್ದುಗೊಳಿಸಿ ನಿವೇಶನಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಾಸಕ ಟಿ.ಎಸ್.ಶ್ರೀವತ್ಸ ಅವರು ಬರೆದಿದ್ದ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದು, ಕ್ರಮವಹಿಸುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಮುಡಾ 50:50 ಅನುಪಾತದ ಅಡಿ ಅಕ್ರಮವಾಗಿ ನೀಡಿರುವ ಸೈಟ್‌ಗಳನ್ನು ವಾಪಸ್ ಪಡೆಯುವ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಪತ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿದ್ದಾರೆ.
ಹಾಗಾಗಿ, 50:50 ಅನುಪಾತದಲ್ಲಿ ಅಕ್ರಮವಾಗಿ ಸೈಟ್ ಪಡೆದಿರುವವರಲ್ಲಿ ಟೆನ್ಷನ್ ಶುರುವಾಗಿದೆ ಎನ್ನಲಾಗಿದೆ.
ಶಾಸಕ ಟಿ.ಎಸ್.ಶ್ರೀವತ್ಸ ಅ.16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ತಮ್ಮ ಪತ್ನಿ ಪಾರ್ವತಿ ಅವರು ಮುಡಾಕ್ಕೆ ನಿವೇಶನಗಳನ್ನು ಹಿಂದಿರುಗಿಸಿರುವುದನ್ನು ಸ್ವಾಗತಿಸುತ್ತೇವೆ. 2020ರಿಂದ ನಟೇಶ್ ಮತ್ತು ದಿನೇಶ್‌ಕುಮಾರ್ ಅವರು ಮುಡಾ ಆಯುಕ್ತರಾಗಿದ್ದ ಅವಧಿಯಲ್ಲಿ ಅಕ್ರಮವಾಗಿ ನಿವೇಶನಗಳನ್ನು ಮನಸೋಇಚ್ಛೆ ಹಂಚಿಕೆ ಮಾಡಲಾಗಿದೆ. ಇಂತಹ ಎಲ್ಲ ಅಕ್ರಮ ನಿವೇಶನಗಳ ಆದೇಶವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ರದ್ದುಗೊಳಿಸಿ ನಿವೇಶನಗಳನ್ನು ಹಿಂಪಡೆಯಬೇಕು ಎಂದು ಪತ್ರದಲ್ಲಿ ಕೋರಿದ್ದರು.
ಮುಖ್ಯವಾಗಿ 2020 ರಿಂದ 2024ರ ಅವಧಿಯಲ್ಲಿ ಮುಡಾ ಉಪಯೋಗಿಸಿಕೊಂಡಿರುವ ಜಮೀನಿಗೆ ಪರಿಹಾರವಾಗಿ ಕಾನೂನುಬಾಹಿರವಾಗಿ ರಚಿತ ಬೇರೆ ಬಡಾವಣೆಗಳಲ್ಲಿ ನೀಡಲಾಗಿರುವ ಎಲ್ಲ ಬದಲಿ ನಿವೇಶನಗಳನ್ನು ಹಿಂಪಡೆಯಬೇಕು. ತಾಂತ್ರಿಕ ಸಮಿತಿಯ ವರದಿ ಮತ್ತು ಅಭಿಪ್ರಾಯಗಳನ್ನು ಕೂಡಲೇ ಜಾರಿಗೊಳಿಸಬೇಕು. ಅಕ್ರಮ ನಿವೇಶನಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಉಪನೋಂದಣಾಧಿಕಾರಿಗೆ ನಿರ್ದೇಶನ ನೀಡಿ ಸದರಿ ಆಸ್ತಿಗಳು ಮುಡಾ ವಿವಾದಿತ ಆಸ್ತಿಗಳು ಎಂದು ಇ.ಸಿ.ಯಲ್ಲಿ ದಾಖಲಿಸಬೇಕು. ಈ ಅಕ್ರಮ ನಿವೇಶನಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆ ನಡೆಯದಂತೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದರು.
50:50 ಅನುಪಾತದಡಿ ನೀಡಲಾಗಿರುವ ಪ್ರಕರಣಗಳ ಅಕ್ರಮ ನಿವೇಶನಗಳ ಆದೇಶವನ್ನು ರದ್ದುಗೊಳಿಸಿ ನಿವೇಶನಗಳನ್ನು ಹಿಂಪಡೆಯುವಂತೆ ಕೋರಿ ಬರೆದಿದ್ದ ಪತ್ರಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. 50:50 ಅನುಪಾತದಡಿ ನೀಡಿರುವ ಎಲ್ಲ ಅಕ್ರಮ ಸೈಟ್‌ಗಳನ್ನು ರದ್ದು ಮಾಡಲಿ. ಬಳಿಕ ಅರ್ಹರಿಗೆ ಕೊಡಲಿ ಎಂಬುದು ನನ್ನ ಉದ್ದೇಶ. ಸೈಟ್ ಪಡೆದವರು ಈಗ ಅದನ್ನು ಅರ್ಧ ಬೆಲೆಗೆ ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಉಪನೋಂದಣಾಧಿಕಾರಿಗೆ ಸೂಚನೆ ನೀಡಬೇಕು. ಟಿ.ಎಸ್.ಶ್ರೀವತ್ಸ, ಶಾಸಕ