ಅಕ್ರಮಮದ್ಯ ಮಾರಾಟವನ್ನು ತಡೆಯಿರಿ

17rajesh1
Published on

ಚಾಮರಾಜನಗರ: ಯಳಂದೂರು ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿ ಅಕ್ರಮ ಮದ್ಯ ಮಾರಾಟ ತಡೆಗೆ ಮಾದರಿ ನಡೆ ಅನುಸರಿಸಿದ್ದು, ಇತರೆ ಗ್ರಾ.ಪಂ ಗಳಲ್ಲೂ ಇದೇ ಮಾದರಿಯನ್ನು ಅನುಸರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಜಿಲ್ಲೆಯ ಅತಿಚಿಕ್ಕ ತಾಲೂಕಾಗಿರುವ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿ ಹೊನ್ನೂರು ಮತ್ತು ಬೀಚಹಳ್ಳಿ ಗ್ರಾಮಗಳನ್ನು ಒಳಗೊಂಡಿದ್ದು, ಸುಮಾರು 13,000 ಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮಗಳ ಕೆಲವು ಮನೆಗಳು, ದಿನಸಿ ಅಂಗಡಿ ಹಾಗೂ ಇನ್ನಿತರೆ ಕಡೆಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡಲಾಗುತ್ತಿತ್ತು. ದಿನದ 24 ಗಂಟೆಯೂ ಮದ್ಯ ಸುಲಭವಾಗಿ ಸಿಗುತ್ತಿದ್ದರಿಂದ ಯುವಕರು ಹಾಗೂ ಸಾರ್ವಜನಿಕರು ಕುಡಿತಕ್ಕೆ ದಾಸರಾಗಿದ್ದರು. ಈ ನಿಟ್ಟಿನಲ್ಲಿ ಗ್ರಾ.ಪಂ ಮಾದರಿ ನಡೆಯನ್ನು ಅನುಸರಿಸಿದ್ದು, ಅಕ್ರಮ ಮದ್ಯ ಮಾರಾಟ ಮಾಡಿದರೆ 10,000 ರೂ, ದಂಡ ವಿಧಿಸುವ ಮತ್ತು ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವ ಹೊಸ ಆದೇಶವನ್ನು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೂಲಕ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಇದು ಮಾದರಿಯಾಗಿದ್ದು, ಜಿಲ್ಲೆಯ ಎಲ್ಲಾ ಗ್ರಾ.ಪಂ ಗಳಲ್ಲಿ ಇದು ಅನ್ವಯವಾಗಲಿ ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಈ ವಾರದ ಲೌಡ್‌ಸ್ಪೀಕರ್‌ನಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.

*ಎಲ್ಲಾ ಗ್ರಾ.ಪಂ ಗಳಲ್ಲಿ ಅನ್ವಯವಾಗಲಿ

ನಮ್ಮ ಗ್ರಾಮ ವ್ಯಾಪ್ತಿಯಲ್ಲಿ ಎಂಎಸ್‌ಐಎಲ್ ಬಾರ್ ಪ್ರಾರಂಭವಾದ ದಿನಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಕಡಿಮೆಯಾಗಿದೆ. ಅದಾಗ್ಯೂ ಕೆಲವು ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುವುದರಿಂದ ಯುವಸಮುದಾಯ ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಈ ವಿಚಾರದಲ್ಲಿ ಹೊನ್ನೂರು ಗ್ರಾ.ಪಂ ತೆಗೆದುಕೊಂಡಿರುವ ನಿರ್ಧಾರ ಅತ್ಯಂತ ಶ್ಲಾಘನೀಯ. ಜಿಲ್ಲೆಯ ಎಲ್ಲಾ ಗ್ರಾ.ಪಂ ಗಳಲ್ಲಿ ಇಂತಹ ನಿರ್ಧಾರ ಕೈಗೊಂಡರೆ ಬಡ ಕುಟುಂಬಗಳಿಗೆ ಅತ್ಯಂತ ಅನುಕೂಲವಾಗುತ್ತದೆ.

ಎಚ್.ಆರ್.ಮಹದೇವಸ್ವಾಮಿ, ಗ್ರಾ.ಪಂ ಮಾಜಿ ಅಧ್ಯಕ್ಷ, ಹೊಂಗನೂರು

*ಹೆಚ್ಚಿನ ದೂರು ಕೇಳಿಬರುತ್ತಿತ್ತು

ಜಿಲ್ಲಾ ಪೊಲೀಸ್ ಇಲಾಖೆಯ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಹೆಚ್ಚಿನ ದೂರುಗಳು ಕೇಳಿಬರುತ್ತಿತ್ತು. ಹೊನ್ನೂರು ಗ್ರಾ.ಪಂ ತೆಗೆದುಕೊಂಡಿರುವ ನಿರ್ಧಾರ ನಿಜ್ಕಕೂ ಮೆಚ್ಚುವಂತದ್ದಾಗಿದೆ. ಗ್ರಾಮಸ್ಥರು, ಯುವಕರು ಹಾಗೂ ಸ್ಥಳಿಯ ಜನಪ್ರತಿನಿಧಿಗಳೇ ಇಂತಹ ನಿರ್ಧಾರ ಕೈಗೊಳ್ಳುವುದರಿಂದ ಅಕ್ರಮ ಮದ್ಯಮಾರಾಟ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ.

ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ

*ಅವಕಾಶ ಇರುವುದಿಲ್ಲ

ಅಕ್ರಮ ಮದ್ಯ ಮಾರಾಟ ಮಾಡಲು ಎಲ್ಲೂ ಅವಕಾಶ ಇರುವುದಿಲ್ಲ. ಅದಾಗ್ಯೂ ಅಕ್ರಮ ಮದ್ಯ ಮಾರಾಟದ ದೂರುಗಳು ಕೇಳಿಬಂದಾಗ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ನಿಟ್ಟಿನಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಈ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಸಾರ್ವಜನಿಕರ ಸಹಭಾಗಿತ್ವ ಇದಕ್ಕೆ ಸಹಕಾರಿಯಾಗಿದೆ.

ಪಿ.ಚಂದ್ರು, ಉಪ ಆಯುಕ್ತ, ಅಬಕಾರಿ ಇಲಾಖೆ, ಚಾಮರಾಜನಗರ

*ಸಂಕಷ್ಟದಲ್ಲಿರುವ ಕುಟುಂಬಗಳು

ಅಧಿಕೃತವಾಗಿ ಮದ್ಯ ಮಾರಾಟ ಮತ್ತು ಅಕ್ರಮ ಮದ್ಯ ಮಾರಾಟವನ್ನು ನಮ್ಮ ಸಂಘಟನೆ ವಿರೋಧಿಸುತ್ತದೆ. ಆದರೆ ಹಲವಾರು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದರಿಂದ ಹಲವಾರು ಬಡ ಮತ್ತು ಮಧ್ಯಮ ಕುಟುಂಬಗಳು ಸಂಕಷ್ಟ ಅನುಭವಿಸುವಂತಾಗಿದೆ. ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವುದು ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಗೂ ಗೊತ್ತಿದೆ. ಈ ಬಗ್ಗೆ ಹೋರಾಟ ಮಾಡದ ಪರಿಸ್ಥಿತಿಯನ್ನು ಹಳ್ಳಿಗಳಲ್ಲಿ ಪ್ರಭಾವಿಗಳು ಹುಟ್ಟಿ ಹಾಕಿದ್ದಾರೆ.

ಪುಟ್ಟಮ್ಮ,ಅಧ್ಯಕ್ಷೆ, ತಾಲೂಕು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಕೊಳ್ಳೇಗಾಲ

*ಚರ್ಚೆಯಾಗುತ್ತದೆ ಕ್ರಮ ಆಗುವುದಿಲ್ಲ

ಪ್ರತಿ ಗ್ರಾಮಗಳಲ್ಲೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಕೊಳ್ಳೇಗಾಲ ಟೌನ್ ವ್ಯಾಪ್ತಿಯಲ್ಲೂ ಇದೆ. ಇದನ್ನು ತಡಗೆಟ್ಟಬೇಕಾದ ಪೊಲೀಸ್ ಇಲಾಖೆ ಹಾಗು ಅಬಕಾರಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಆಗೊಂದು ಈಗೊಂದು ಪ್ರಕರಣಗಳು ದಾಖಲಾಗುತ್ತಿವೆ. ಆದರೂ ಸಂಪೂರ್ಣವಾಗಿ ಈ ದಂಧೆ ನಿಂತಿಲ್ಲ. ಹೊನ್ನೂರು ಗ್ರಾ.ಪಂ ತೆಗೆದುಕೊಂಡ ತೀರ್ಮಾನ ಶ್ಲಾಘಿಸುವಂತದ್ದು. ಎಲ್ಲ ಗ್ರಾ.ಪಂ ನಲ್ಲೂ, ಸ್ಥಳೀಯ ನಗರಸಭೆಯಲ್ಲೂ ಈ ಕ್ರಮ ಆಗಬೇಕು. ಪ್ರತಿ ಎಸ್ಸಿ-ಎಸ್ಟಿ ಸಭೆ ಯಲ್ಲಿ ಈ ಬಗ್ಗೆ ಚರ್ಚೆ ಆಗುತ್ತದೆ ಕ್ರಮ ಮಾತ್ರ ಆಗುವುದಿಲ್ಲ.

ಆರ್.ಹರೀಶ್, ಶಿಕ್ಷಕರು, ಕೊಳ್ಳೇಗಾಲ

*ಪೋಡುಗಳಲ್ಲೂ ಕ್ರಮವಾಗಲಿ

ತಾಲೂಕಿನ ಗಿರಿಜನರ ಪೋಡುಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮದ್ಯದ ಚಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಹಾಡಿಗಳಲ್ಲಿ ಸ್ವಾಸ್ಥ್ಯ ಹದಗೆಡುತ್ತಿದೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಕೆಲವು ಕೇಸ್‌ಗಳನ್ನು ದಾಖಲಿಸುತ್ತಿದ್ದರೂ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಬಿದ್ದಿಲ್ಲ. ಯಳಂದೂರು ತಾಲೂಕಿನ ಹೊನ್ನೂರು ಗ್ರಾ.ಪಂ ದಂಡ ವಿಧಿಸುವ ಆದೇಶವನ್ನು ಹೊರಡಿಸಿರುವುದರಿಂದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಬಿದ್ದಿದೆ. ಪೋಡುಗಳ ವ್ಯಾಪ್ತಿಯ ಗ್ರಾ.ಪಂಗಳಲ್ಲೂ ಈ ರೀತಿಯ ದಂಡಸ್ತ್ರ ಉಪಯೋಗಿಸಬೇಕು.

ಜೆ.ಮಹದೇವಸ್ವಾಮಿ, ಗಿರಿಜನ ಮುಖಂಡ, ಕೋಣನಕೆರೆ, ಹನೂರು

*ಸಂಪೂರ್ಣ ಕಡಿವಾಣ ಹಾಕಲಿ

ಹಲವಾರು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಲೇ ಇದೆ. ಹೊನ್ನೂರು ಗ್ರಾಮ ಪಂಚಾಯಿತಿ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕುವ ಮೂಲಕ ಮಾದರಿ ನಡೆಯನ್ನು ಅನುಸರಿಸಿದೆ. ಇದೇ ಮಾದರಿಯಲ್ಲಿ ಎಲ್ಲಾ ಗ್ರಾ.ಪಂ ಗಳಲ್ಲೂ ಇಂತಹ ನಿರ್ಣಯ ಕೈಗೊಂಡು ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು.

ನಾಗೇಶ್, ಗೋಪಾಲಪುರ, ಗುಂಡ್ಲುಪೇಟೆ

*ದೇಶಕ್ಕೆ ಮಾದರಿಯಾದ ನಡೆ

ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ. ಬಹುಶಃ ಇದು ದೇಶದಲ್ಲೇ ಮಾದರಿಯಾದ ನಡೆಯಾಗಿದೆ. ಆದರೇ ಅದು ಸರ್ಕಾರದ ಯೋಜನೆಗಳಂತಾಗಬಾರದು. ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಸಂಪೂರ್ಣವಾಗಿ ನಿಲ್ಲುವಂತೆ ಕ್ರಮವಹಿಸಬೇಕು.

ಹೊನ್ನೂರು ಪ್ರಕಾಶ್, ರೈತ ಮುಖಂಡ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net