ಅಕ್ರಮ ಸುಂಕ ವಸೂಲಿ ಖಂಡಿಸಿ ಪ್ರತಿಭಟನೆ

pro
Published on

ಹಾಸನ: ಬೀದಿ ಬದಿ ವ್ಯಾಪಾರಿಗಳಿಂದ ನಗರಸಭೆ ಸಿಬ್ಬಂದಿ ಅಕ್ರಮ ಸುಂಕ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೀದಿ ಬದಿ ವ್ಯಾಪಾರಿಗಳು ರೈತ ಹಾಗೂ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಆನೇಕೆರೆ ರವಿ ಮಾತನಾಡಿ, ತಮ್ಮ ಜೀವನೋಪಾಯಕ್ಕಾಗಿ ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿರುವ ಬೀದಿ ಬದಿ ವ್ಯಾಪಾರಿಗಳಿಂದ ನಗರಸಭೆ ಅಧಿಕಾರಿಗಳು ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಿದ್ದಾರೆ. ಯಾವುದೇ ರೀತಿಯ ರಶೀದಿ ನೀಡದೆ ಮನಬಂದಂತೆ ಸುಂಕ ವಸೂಲಿ ಮಾಡುತ್ತಿರುವ ನಗರಸಭೆ ಅಧಿಕಾರಿಗಳ ನಡೆ ಖಂಡನೀಯ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಇದಕ್ಕೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆಯೂ ಕೂಡ ಹಲವು ಬಾರಿ ಈ ಬಗ್ಗೆ ಮನವಿ ಮಾಡಲಾಗಿದ್ದು, ಅಧಿಕಾರಿಗಳು ಈ ಬಗ್ಗೆ ಸರಿಯಾದ ಉತ್ತರ ನೀಡಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ ಕುಡಿಯುವ ನೀರು, ನೆರಳು ಹಾಗೂ ಇನ್ನಿತರೆ ಯಾವುದೇ ಮೂಲ ಸೌಕರ್ಯ ಒದಗಿಸದೆ ಇದ್ದರೂ, ಸುಂಕ ವಸೂಲಿಗೆ ಮುಂದಾಗುತ್ತಿರುವ ನಗರಸಭೆ ಅಧಿಕಾರಿಗಳು ಕೂಡಲೇ ಸುಂಕ ವಸೂಲಿಯನ್ನು ನಿಲ್ಲಿಸಬೇಕು. ಮೊದಲು ಬೀದಿ ಬದಿ ವ್ಯಾಪಾರಿಗಳಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಿಕೊಡಲಿ. ಅದಾದ ಬಳಿಕ ಸುಂಕ ವಸೂಲಿ ಮಾಡಲಿ. ಅದುವರೆಗೂ ಸುಂಕ ವಸೂಲಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net