ಅಕ್ರಮ ವಲಸಿಗರನ್ನು ಗಡಿಪಾರು ಮಾಡಿ

Published on

ಜಿಲ್ಲಾಡಳಿತಕ್ಕೆ ಮಾಜಿ ಸಚಿವ ಸೊಗಡುಶಿವಣ್ಣ ಆಗ್ರಹ, ಶಾಂತಿ, ಭಾವೈಕ್ಯತೆಗೆ ಧಕ್ಕೆ

ತುಮಕೂರು: ಜಿಲ್ಲೆಯಲ್ಲಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳ ಜತೆಗೆ ಬಾಂಗ್ಲಾ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡುವಂತೆ ಜಿಲ್ಲಾಡಳಿತಕ್ಕೆ ಮಾಜಿ ಸಚಿವ ಸೊಗಡುಶಿವಣ್ಣ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಪತ್ತೆ ಮಾಡಿ ಅವರ ದೇಶಕ್ಕೆ ವಾಪಸ್​ ಕಳುಹಿಸಲು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದ್ದು, ಪೊಲೀಸ್​ ಹಾಗೂ ಗುಪ್ತಚರ ಇಲಾಖೆ ಕಾರ್ಯಪ್ರವೃತ್ತವಾಗಿ ಜಿಲ್ಲೆಯಲ್ಲಿಯಲ್ಲಿರುವ ಪಾಕಿಸ್ತಾನ, ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಹೊರದಬ್ಬಬೇಕು ಎಂದು ಒತ್ತಾಯಿಸಿದರು.

ಭಯೋತ್ಪಾದಕರು, ಮಾದಕ ಪದಾರ್ಥ ಮಾರಾಟ ಜಾಲದಲ್ಲಿ ಭಾಗಿಯಾದವರು, ಸಮಾಜ ದ್ರೋಹಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕು. ಬಾಂಗ್ಲಾದೇಶದಿಂದ ಅಕ್ರಮವಾಗಿ ಒಳನುಸುಳಿ ದೇಶದೆಲ್ಲೆಡೆ ವಾಸಿಸುತ್ತಿರುವುದಲ್ಲದೆ, ಇಲ್ಲಿನ ರೇಷನ್​ ಕಾರ್ಡ್​, ಆಧಾರ್​ ಕಾರ್ಡ್​ ಮಾಡಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿವೆ. ಅಂತಹವರನ್ನು ಗುರುತಿಸಿ, ಅಕ್ರಮವಾಗಿ ಆಧಾರ್​ ಕಾರ್ಡ್​ ಮಾಡಿಸಿಕೊಳ್ಳಲು ನೆರವಾದವರನ್ನೂ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದರು.

ಪಹಲ್ಗಾಮ್​ನಲ್ಲಿ ಪ್ರವಾಸಿ ಹಿಂದುಗಳನ್ನು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದನ್ನು ಸಹಿಸಲಾಗುವುದಿಲ್ಲ. ಭಾರತದಲ್ಲಿ ಹಿಂದು, ಮುಸ್ಲಿಮರು ಭಾವೈಕ್ಯದಿಂದ ಬಾಳುತ್ತಿದ್ದಾರೆ. ಇವರ ನಡುವೆ ಶಾಂತಿ, ಭಾವೈಕ್ಯಕ್ಕೆ ಧಕ್ಕೆ ಉಂಟು ಮಾಡುವ ಸಲುವಾಗಿ ಭಯೋತ್ಪಾದಕ ಕೃತ್ಯ ಎಸಗಲಾಗುತ್ತಿದೆ. ಭಯೋತ್ಪಾದನೆ ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ದೇಶದ ಹಿಂದು, ಮುಸ್ಲಿಂ ಸೇರಿ ಎಲ್ಲ ಜಾತಿ, ಧರ್ಮದವರೂ ಮೋದಿ ಅವರ ಕಾರ್ಯಕ್ಕೆ ಬೆಂಬಲ ನೀಡಬೇಕು. ದೇಶದ ಭದ್ರತೆ, ಸಾರ್ವಭೌಮತ್ವ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಮ್ಮದೇ ದೇಶಗಳು. ದುರದೃಷ್ಟದಿಂದ ಬೇರೆ ರಾಷ್ಟ್ರಗಳಾಗಿವೆ. ಭಾರತ ಸರ್ಕಾರ ಈ ದೇಶಗಳನ್ನು ವಶಪಡಿಸಿಕೊಂಡು ಅಖಂಡ ಭಾರತ ನಿಮಾರ್ಣಕ್ಕೂ ಪ್ರಯತ್ನ ಪಡಬೇಕು. ನಮ್ಮ ದೇಶದ ಮುಸ್ಲಿಮರು ಈ ಮಣ್ಣಿನಲ್ಲೇ ಹುಟ್ಟಿದವರು, ಅವರಲ್ಲ್ಲೂ ದೇಶಾಭಿಮಾನ, ಭಾವೈಕ್ಯತೆಯ ಗುಣ ಇದೆ. ಆದರೆ ಭಯೋತ್ಪಾದನೆ ಮೂಲಕ ದೇಶದಲ್ಲಿ ಒಡಕು ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಮುಸ್ಲಿಂಮರು ಎಚ್ಚರಿಕೆಯಿಂದ ಇರಬೇಕು. ಭಯೋತ್ಪಾದಕರು, ಸಮಾಜ ದ್ರೋಹಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್​, ಮುಖಂಡರಾದ ಕೆ.ಹರೀಶ್​, ಇಮ್ರಾನ್​ ರಾಜ್​ ಮಹಮ್ಮದ್​ ಇಸ್ಮಾಯಿಲ್​, ಅತಿಕ್​, ಸೈಯದ್​ ನದೀಂ ಉಲ್ಲಾ, ವಾಸೀಂ ಖಾನ್​, ನಟರಾಜ್​ ಹಾಜರಿದ್ದರು.

ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಲಿ. ಭಾರತದ ಮೇಲೆ ಭಯೋತ್ಪಾದಕ ಕೃತ್ಯ ನಡೆಸುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಅನಿವಾರ್ಯವಾದರೆ ಯುದ್ಧ ಸಾರಲೇಬೇಕು. | ಸೊಗಡುಶಿವಣ್ಣ ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net