

ವಿರಾಜಪೇಟೆ: ಕೊಡಗಿನ ಸಾವಿರಾರು ಎಕರೆ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳಿಗೆ ಆಶ್ರಯ ಕಲ್ಪಿಸಲು ಷಡ್ಯಂತ್ರ ನಡೆದಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.
ರಾಷ್ಟ್ರೀಯ ಜನಗಣತಿ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ್ನ ಸೇರಿಸಬೇಕೆಂದು ಒತ್ತಾಯಿಸಿ ವಿರಾಜಪೇಟೆಯಲ್ಲಿ ಸಿಎನ್‌ಸಿ ವತಿಯಿಂದ ಇತ್ತೀಚೆಗೆ ನಡೆದ 11ನೇ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಕ್ರಮ ವಲಸಿಗರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಲಾಗುತ್ತಿದ್ದು, ದೊಡ್ಡ ಜಾಲವೊಂದು ಕಾರ್ಯಾಚರಿಸುತ್ತಿದೆ. ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳು ಕಾನೂನುಬಾಹಿರವಾಗಿ ಕೊಡವ ಲ್ಯಾಂಡ್‌ನಲ್ಲಿ ಆಶ್ರಯ ಪಡೆದು ತಮ್ಮ ಇರುವಿಕೆಯನ್ನು ಸಕ್ರಮಗೊಳಿಸಿಕೊಳ್ಳಲು ಮುಂದಾಗಿರುವುದು, ಸರ್ಕಾರಿ ಯಂತ್ರಗಳು ಆಶ್ರಯ ನೀಡಲು ಹವಣಿಸುತ್ತಿರುವುದು ಮತ್ತು ದೊಡ್ಡ ದೊಡ್ಡ ಕಂಪೆನಿಗಳು ಬೆಂಬಲಕ್ಕೆ ನಿಂತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ನಕಲಿ ಆಧಾರ್, ಐಡಿ ಕಾರ್ಡ್ ನೀಡುವ ಜಾಲ ಕಳೆದ ಎರಡು ವರ್ಷಗಳಿಂದ ಚಟುವಟಿಕೆಯಿಂದ ಇದ್ದು, ಈ ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮ ವಲಸಿಗರು ಕೊಡಗು ಮಾತ್ರವಲ್ಲದೆ ಹೊರಭಾಗದಲ್ಲೂ ತೋಟದ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕೊಡವ ಲ್ಯಾಂಡ್‌ನ ಪ್ರತಿ ಗ್ರಾಮಗಳಲ್ಲಿ ಅವರದ್ದೇ ಆದ ಮಾರುಕಟ್ಟೆ, ಮನಿಚೈನ್, ಬಡ್ಡಿದಂಧೆ, ಗೋವು ಕಳ್ಳತನ, ಹಲ್ಲೆ, ಸುಲಿಗೆ, ಕಾಫಿ, ಕಾಳುಮೆಣಸು ಕಳ್ಳತನ, ಕಳ್ಳಬೇಟೆ, ಅಕ್ರಮವಾಗಿ ಕಾವೇರಿ ನದಿಯಿಂದ ವಿದ್ಯುತ್ ತಂತಿ ಬಳಸಿ ಮೀನು ಹಿಡಿಯುವುದು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಭ್ರಷ್ಟ ರಾಜಕಾರಣಿಗಳು ಅಕ್ರಮ ವಲಸಿಗರ ಮಾಹಿತಿ ಕಲೆಹಾಕಿ ಅವರನ್ನೆಲ್ಲ ಮತದಾರರ ಪಟ್ಟಿಯಲ್ಲಿ ಸೇರಿಸಿ ನಿವೇಶನ, ವಸತಿ ನೀಡುವ ಭರವಸೆ ನೀಡುತ್ತಿದ್ದು, ಇದಕ್ಕೆ ಆಡಳಿತ ಯಂತ್ರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ಮುಕ್ಕೋಡ್ಲುವಿನ ಆದಿಮಸಂಜಾತ ವೃದ್ಧ ದಂಪತಿ ಕಾಳಚಂಡ ನಾಣಿಯಪ್ಪ ಅವರ ತೋಟವನ್ನು ನಾಶ ಮಾಡಿ ಅವಮಾನಿಸಿರುವುದು ಅಮಾನವೀಯ. ಮೂಲ ನಿವಾಸಿ ಕೊಡವರನ್ನು ಅವರ ಪ್ರಾಚೀನ ನೆಲೆಯಿಂದ ಪಲ್ಲಟಗೊಳಿಸಿ ಖಾಲಿಯಾದ ಆ ಪ್ರದೇಶದಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿ ಓಟ್ ಬ್ಯಾಂಕ್ ಸೃಷ್ಟಿಕೊಳ್ಳುವ ಹುನ್ನಾರ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡವ ನೆಲದ ನಿಜ ವಾರಸುದಾರರಾದ ಆದಿಮಸಂಜಾತ ಕೊಡವರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಬಾಂಗ್ಲಾ, ಮಾಯನ್ಮಾರ್‌ನ ರಾಖಿನೆ ಪ್ರಾಂತ್ಯದ ರೋಹಿಂಗ್ಯಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಸಂಚು ನಡೆದಿದೆ ಎಂದು ಆರೋಪಿಸಿದರು.
ಉಷಾ ದೇವಮ್ಮ, ಮುದ್ದಿಯಡ ಲೀಲಾವತಿ, ಬೊಳ್ಳಂಡ ಸೌಮ್ಯಾ ಪೂವಯ್ಯ, ಪಾಂಡಂಡ ಗೊಂಬೆ ಪ್ರಕಾಶ್, ಕೋಳೆರ ಟೀನ ರನ್ನ, ಪಾಲಂಧೀರ ಗಂಗಮ್ಮ, ದೇಯಂಡ ಶಾಂತಿ, ನೆಲ್ಲಮಕ್ಕಡ ಕಾವೇರಮ್ಮ, ಮುಂಡಂಡ ಲವ್ಲಿ, ಕರಿನೆರವಂಡ ಬೋಜಿ ಭೀಮಯ್ಯ, ಕರಿನೆರವಂಡ ಶಾಂತಿ, ಬಿದ್ದಂಡ ತಿಲಕ, ಬಿದ್ದಂಡ ಸುರಕ್ಷಿತಾ, ಕರಿನೆರವಂಡ ಜಯ, ಚಿಲ್ಲವಂಡ ರೇಖಾ ಹರೀಶ್, ಕೂತಂಡ ಅಕ್ಷಿತಾ ಲೋಕೇಶ್, ಪೋಕರ್ಂಡ ಬೋಪಣ್ಣ, ಮಾದೆಯಂಡ ಹ್ಯಾರಿ ಮತ್ತಿತರರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.