ಅಕ್ರಮ ಮರಳು ತುಂಬಿದ್ದ ಲಾರಿಗಳು ವಶ

MARALU
Published on

ಯಾದಗಿರಿ: ಶಹಾಪುರ ತಾಲೂಕಿನ ಹತ್ತಿಗೂಡೂರು ಕ್ರಾಸ್ ಮತ್ತು ಯಾದಗಿರಿ ನಗರದಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ 10 ಲಾರಿಗಳನ್ನು ಶುಕ್ರವಾರ ಸಂಜೆ ಜಪ್ತಿ ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ಶಾ ಆಲಂ ಹುಸೇನ್ ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ಹತ್ತಿಗೂಡೂರು ಕ್ರಾಸ್ ಬಳಿ ಮರಳು ತುಂಬಿದ್ದ 4 ಲಾರಿಗಳು ಮತ್ತು ಯಾದಗಿರಿಯಲ್ಲಿ 6 ಲಾರಿಗಳನ್ನು ವಶಕ್ಕೆ ಪಡೆದು ಪ್ರಾದೇಶಿಕ ಸಾರಿಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. ಅಲ್ಲದೆ ಲಾರಿಗೆ ಸಂಬಂಧಿಸಿದ ಮಾಲೀಕ, ಸಾಗಾಟಗಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಹೆಚ್ಚಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಪ್ರತಿನಿತ್ಯ ದೂರು ಕೇಳಿ ಬರುತ್ತಿವೆ. ಕೂಡಲೇ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಇತ್ತೀಚೆಗೆ ನಡೆದಿದ್ದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಕಟ್ಟುನಿಟ್ಟಾಗಿ ಸೂಚಿಸಿದ್ದರು. ಸಚಿವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಲಾಗಿದೆ ಎಂದರು.

ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಾರಿಗಳಲ್ಲಿ ಮರಳು ಸಾಗಾಟದಿಂದ ರಸ್ತೆಗಳು ಹಾಳಾಗುತ್ತಿವೆ. ಅಲ್ಲದೆ ಅಕ್ರಮ ಮರಳು ಮಾರಾಟ ಸಾಗಣೆ ಕಂಡು ಬಂದರೆ ಸಾರ್ವಜನಿಕರು ಜಿಲ್ಲಾಡಳಿತದ ಗಮನಕ್ಕೆ ತರಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net