

ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಅಕ್ರಮ ಮದ್ಯ ಮಾರಾಟ ಸಂಬಂಧ ಎರಡು ಪತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮ.ಬೆಟ್ಟದ ಜನತಾ ಕಾಲನಿಯ ರವಿಶಂಕರ್, ಆಣೆಹೊಲ ಗ್ರಾಮದ ಚಂದ್ರು ಹಾಗೂ ಇಂಡಿಗನತ್ತ ಗ್ರಾಮದ ಮಹೇಶ್ ಬಂಧಿತರು.
ಮ.ಬೆಟ್ಟ ಪೊಲೀಸರಿಗೆ ಶನಿವಾರ ಹುಲಿಗೂಡಿನ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ದೊರಕಿದೆ. ಕೂಡಲೇ ದಾಳಿ ನಡೆಸಿದ ಪೊಲೀಸರು ಚಂದ್ರು ಹಾಗೂ ರವಿಶಂಕರ್ ಬಂಧಿಸಿ 50 ಮದ್ಯದ ಪೌಚ್ ವಶಪಡಿಸಿಕೊಂಡರು. ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಪಾಲಾರ್‌ಗೆ ತೆರಳುವ ಗೇಟ್ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಹೇಶ್ ಎಂಬಾತನನ್ನು ಬಂಧಿಸಿ 10 ಬಿಯರ್ ಬಾಟಲ್ ಹಾಗೂ 10 ಮದ್ಯದ ಪೌಚ್ ವಶಪಡಿಸಿಕೊಂಡ ಪೊಲೀಸರು ಈ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಸಂಬಂಧ ಮ.ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಅಪರಾಧ ವಿಭಾಗದ ಎಸೈ ರವಿ, ಸಿಬ್ಬಂದಿಗಳಾದ ವಿನೋದ್, ರಮೇಶ್ ಹಾಗೂ ಮಹೇಶ್ ಭಾಗಿಯಾಗಿದ್ದರು.
ಮದ್ಯ ದಂಧೆ ವಿಪರೂತವಾಗಿತ್ತು: ಮ.ಬೆಟ್ಟದಲ್ಲಿ ಇತ್ತೀಚೆಗೆ ಅಕ್ರಮ ಮದ್ಯ ಮಾರಾಟದ ದಂಧೆ ವಿಪರೀತವಾಗಿತ್ತು. ಇದರಿಂದ ಕುಡುಕರ ಹಾವಳಿ ಹೆಚ್ಚಾಗಿತ್ತು. ಪರಿಣಾಮ ಶ್ರೀಕ್ಷೇತ್ರದ ಪಾವಿತ್ರೃತೆಗೆ ದಕ್ಕೆಯಾಗುತ್ತಿತ್ತು. ಈ ಬಗ್ಗೆ ನಡೆದ ಪ್ರಾಧಿಕಾರದ ಸಭೆಯಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರು ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವಾರದ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ ಕವಿತಾ ಅವರು ಮ.ಬೆಟ್ಟದ ವಿವಿಧೆಡೆ ಖುದ್ದು ದಾಳಿ ನಡೆಸಿ ಸುಮಾರು 154 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಮ.ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.