ಅಕ್ರಮ ಮದ್ಯ ಮಾರಾಟಕ್ಕೆ 2 ವರ್ಷ ಕಠಿಣ ಶಿಕ್ಷೆ

Published on

ಚಾಮರಾಜನಗರ: ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಣೆ ಮಾಡುವವರಿಗೆ ನಡುಕ ಹುಟ್ಟಿಸುವ ರೀತಿಯಲ್ಲಿ ಪ್ರಕರಣವೊಂದರ ವಿಚಾರಣೆಯಲ್ಲಿ ಚಾಮರಾಜನಗರದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎ್ಸಿ ನ್ಯಾಯಾಲಯ ತೀರ್ಪು ಹೊರಡಿಸಿದೆ.

ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮದ್ಯ ಸಾಗಣೆ ಮಾಡುತ್ತಿದ್ದ ಇಬ್ಬರ ಮೇಲಿನ ಆರೋಪವು ಸಾಬೀತಾಗಿರುವ ಹಿನ್ನೆಲೆಯಲ್ಲಿ 2 ವರ್ಷ ಕಠಿಣ ಸಜೆ ಮತ್ತು 17 ಸಾವಿರ ರೂ.ದಂಡವನ್ನು ವಿಧಿಸಿ ಮಂಗಳವಾರ ಕೋರ್ಟ್ ತೀರ್ಪು ನೀಡಿದೆ. ಮೈಸೂರಿನ ಕೆ.ಜಿ ಕೊಪ್ಪಲಿನ ನಿವಾಸಿ ಆರ್.ಶ್ರೀನಿವಾಸ್, ಚಾಮರಾಜನಗರದ ಉಪ್ಪಾರ ಬೀದಿಯ ರವಿ ಶಿಕ್ಷೆಗೊಳಗಾಗಿರುವವರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಸುನೀಲ್ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮಹಮ್ಮದ್ ವಸೀಂಉಲ್ಲಾ ವಾದ ಮಂಡಿಸಿದ್ದಾರೆ.

ಏನಿದು ಪ್ರಕರಣ?: 2022ರ ೆ.16ರಂದು ಸಂಜೆ 8 ಗಂಟೆ ಸಮಯದಲ್ಲಿ ನಗರದ ಕರಿನಂಜನಪುರ ರಸ್ತೆಯ ಸರ್ಕಾರಿ ಪದವಿ ಕಾಲೇಜಿನ ಹತ್ತಿರ ಶ್ರೀನಿವಾಸ್ ಮತ್ತು ರವಿ ವಿವಿಧ ರೀತಿಯ ಮದ್ಯದ ಪೌಚ್‌ಗಳನ್ನು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮೋಟಾರ್ ಬೈಕ್‌ನಲ್ಲಿ ಸಾಗಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಚಾಮರಾಜನಗರ ಪಟ್ಟಣ ಪೊಲೀಸರು ದಾಳಿ ಮಾಡಿದಾಗ ಶ್ರೀನಿವಾಸ್ ಸಿಕ್ಕಿಬಿದ್ದಿದ್ದ. ರವಿ ತಪ್ಪಿಸಿಕೊಂಡು ಹೋಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ವಿರುದ್ಧ ಅಂತಿಮ ದೋಷಾರೋಪ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ತಪ್ಪು ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಬ್ಬರಿಗೂ ತಲಾ 2 ವರ್ಷ ಕಠಿಣ ಸಜೆ ಮತ್ತು 17 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net