ಅಕ್ರಮ ಮದ್ಯ ಮಾರಾಟಕ್ಕೆ 10 ಸಾವಿರ ರೂ. ದಂಡ!

Published on

ಯಳಂದೂರು: ಜಿಲ್ಲೆಯ ಅತಿ ಚಿಕ್ಕ ತಾಲೂಕಾಗಿರುವ ಯಳಂದೂರಿನ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ 10 ಸಾವಿರ ರೂ. ದಂಡ ವಿಧಿಸುವ ಹೊಸ ಆದೇಶವನ್ನು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ನಿರ್ಣಯದಿಂದ ಇದು ಇತರ ಪಂಚಾಯಿತಿಗೆ ಮಾದರಿಯಾಗಿದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟದಿಂದ ಹೆಚ್ಚಾಗಿ ಯುವ ಸಮುದಾಯ ದಾರಿ ತಪ್ಪುತ್ತಿರುವುದನ್ನು ಕಂಡ ಇಲ್ಲಿನ ಕೆಲವರು ಈ ಬಗ್ಗೆ ಕ್ರಮ ವಹಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ತಂಡ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಒಂದು ನಿರ್ಣಯ ಕೈಗೊಂಡು ಅಕ್ರಮ ಮದ್ಯ ಮಾರಾಟ ಮಾಡಿದರೆ ಅಂತಹವರಿಗೆ 10 ಸಾವಿರ ರೂ. ದಂಡ ಹಾಗೂ ಸಂಬಂಧಪಟ್ಟ ಇಲಾಖೆಗೆ ಇವರ ವಿರುದ್ಧ ಮಾಹಿತಿ ನೀಡಿ ದೂರು ದಾಖಲಿಸಲು ತೀರ್ಮಾನಿಸಲಾಗಿದೆ.

ಮನೆ-ಮನೆಗಳಲ್ಲೂ ಸಿಗುತ್ತಿದ್ದ ಅಕ್ರಮ ಮದ್ಯ

ಈ ಗ್ರಾಮ ಪಂಚಾಯಿತಿ ಹೊನ್ನೂರು ಹಾಗೂ ಬೀಚಹಳ್ಳಿ ಗ್ರಾಮಗಳನ್ನು ಒಳಗೊಂಡಿದ್ದು, 13 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ತಾಲೂಕಿನ ದೊಡ್ಡ ಪಂಚಾಯಿತಿಗಳಲ್ಲಿ ಒಂದಾಗಿದೆ. ಇಲ್ಲಿರುವ ಕೆಲವು ಮನೆಗಳು, ದಿನಸಿ ಅಂಗಡಿ, ಗೂಡಂಗಡಿಗಳು, ಹೊಟೇಲ್‌ಗಳಲ್ಲಿ ಅವ್ಯಾಹತವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ದಿನದ 24 ಗಂಟಯೂ ಇಲ್ಲಿ ಮದ್ಯ ಸುಲಭವಾಗಿ ಸಿಗುತ್ತಿದ್ದರಿಂದ ಕುಡಿತಕ್ಕೆ ದಾಸರಾಗುವವರ ಪ್ರಮಾಣ ಹೆಚ್ಚುತ್ತಾ ಹೋಯಿತು.

ಮಿತಿಮೀರಿದ ಕುಡುಕರ ಸಂಖ್ಯೆ ಇಲ್ಲಿನ ಯುವ ಸಮೂಹವೂ ಸೇರಿದಂತೆ ಹೆಚ್ಚು ಮಂದಿ ಮದ್ಯದ ದಾಸರಾಗುತ್ತಿದ್ದು. ಕೆಲಸ ಕಾರ್ಯಗಳಿಗೆ ತೆರಳದೆ ತಮ್ಮ ಕುಟುಂಬವನ್ನು ಇನ್ನಷ್ಟು ಸಾಲಕ್ಕೆ ದೂಡುತ್ತಿದ್ದರು. ಅಲ್ಲದೆ ಗ್ರಾಮದಲ್ಲಿ ಸಣ್ಣಸಣ್ಣ ವಿಷಯಗಳಿಗೂ ಅಲ್ಲಲ್ಲಿ ಗದ್ದಲಗಳು ನಡೆಯುತ್ತಿತ್ತು. ಅಪಘಾತದಿಂದ ಅನೇಕ ಸಾವುನೋವುಗಳು ನಡೆದಿತ್ತು. ಇದನ್ನು ಮನಗಂಡ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಸದಸ್ಯರು ಹಾಗೂ ಕೆಲ ಯುವಕರು ಗ್ರಾಮ ಪಂಚಾಯಿತಿಗೆ ಅಕ್ರಮ ಮದ್ಯ ಮಾರಾಟವನ್ನು ನಿಯಂತ್ರಿಸುವಂತೆ ಮನವಿ ಪತ್ರ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಪಂಚಾಯಿತಿ ಇಲ್ಲಿಗೆ ಅಕ್ರಮ ಮದ್ಯ ಮಾರಾಟ ಮಾಡಿದ್ದಲ್ಲಿ 10 ಸಾವಿರ ರೂ. ದಂಡ ಜತೆಗೆ ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ನಿರ್ಣಯ ಕೈಗೊಂಡಿತು. ಇದನ್ನು ಜಾರಿ ಮಾಡಲು ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿತ್ತು. ಇದರಿಂದ ಕೂಲಿ ಕಾರ್ಮಿಕರೇ ಹೆಚ್ಚು ದಾಸರಾಗುತ್ತಿದ್ದರು. ಇದರಿಂದ ಇವರ ಕುಟುಂಬಕ್ಕೆ ಆರ್ಥಿಕ ಹೊರೆ ಹೆಚ್ಚಾಗುತ್ತಿತ್ತು. ಗ್ರಾಮದಲ್ಲಿ ಕೆಲವರು ಇದಕ್ಕೆ ಬಲಿಯಾಗಿದ್ದರು. ಅಲ್ಲದೆ ಅಶಾಂತಿಗೂ ಇದು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಪಂಚಾಯಿತಿಯಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸುವ ಕುರಿತು ನವೆಲ್ಲರೂ ಚರ್ಚಿಸಿ ಫೆ.13 ರ ಸಾಮಾನ್ಯ ಸಭೆಯಲ್ಲಿ ಇದನ್ನು ನಿಷೇಧಿಸುವ ಕುರಿತು ತೀರ್ಮಾನ ಕೈಗೊಂಡಿದ್ದೇವೆ. ಆರ್. ಪುಟ್ಟಬಸವಯ್ಯ, ಗ್ರಾಪಂ ಅಧ್ಯಕ್ಷ, ಹೊನ್ನೂರು ಈ ಹಿಂದೆ ನಮ್ಮ ಗ್ರಾಮದಲ್ಲಿ ಸಿವಿಲ್ ನ್ಯಾಯಾಧೀಶರ ಕಾರ್ಯಕ್ರಮ ನಡೆದಿತ್ತು. ಆ ಸಂದರ್ಭದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಕೆಲವರು ದೂರು ನೀಡಿದ್ದರು. ಆಗ ನ್ಯಾಯಾಧೀಶರು ಇದನ್ನು ನಿಷೇಧಿಸಲು ನಿಮಗೆ ಅಧಿಕಾರಿವಿದ್ದು, ಈ ಬಗ್ಗೆ ಕ್ರಮ ವಹಿಸಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾವು ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸಿದ್ದೇವೆ. ಅಲ್ಲದೇ ಮಾರಾಟ ಮಾಡುವವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನು ನಿಷೇಧಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ 10 ಸಾವಿರ ದಂಡ ಹಾಗೂ ದೂರು ದಾಖಲಿಸಲಾಗುವುದು. ಈ ಬಗ್ಗೆ ಫೆ. 13 ರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಿರಂಜನ್‌ಕುಮಾರ್ ಪಿಡಿಒ, ಹೊನ್ನೂರು ಗ್ರಾಪಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net