ಅಕ್ರಮ ಮದ್ಯ ಮಾರಾಟ ಸ್ಥಗಿತಗೊಳಿಸಿ

ASS
Published on

ಚಿತ್ರದುರ್ಗ: ಹಿರಿಯೂರು ತಾಲೂಕಿನ ಪಟ್ರೇಹಳ್ಳಿ, ಆದಿವಾಲ ಫಾರಂ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ಗ್ರಾಮಗಳಲ್ಲಿ 800 ಮನೆಗಳಿದ್ದು, ದಲಿತರೆ ಹೆಚ್ಚಾಗಿ ಮದ್ಯ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ನಿತ್ಯವೂ ಕೂಲಿ ಮಾಡಿ ದುಡಿದ ಹಣವನ್ನು ಮದ್ಯಕ್ಕೆ ಸುರಿಯುತ್ತಿರುವ ಕಾರಣ ಕುಟುಂಬದ ನಿರ್ವಹಣೆಗೆ ಕಷ್ಟವಾಗುತ್ತಿದ್ದು, ಮಹಿಳೆಯರು ರೋಧಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

13 ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಸಾಕಷ್ಟು ಬಾರಿ ಅಬಕಾರಿ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಜಿಲ್ಲಾಡಳಿತ ಗಮನಹರಿಸಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದರು.

ಸೇನೆ ಜಿಲ್ಲಾ ಅಧ್ಯಕ್ಷ ವಿ.ಶಿವಕುಮಾರ್, ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ವಿ.ಗಿರೀಶ್‌ಕುಮಾರ್, ರೇವಣಸಿದ್ದಪ್ಪ, ಮಹಮದ್ ರಫಿ, ಆರ್.ರಾಘವೇಂದ್ರ, ರವಿಕುಮಾರ್, ಎಸ್.ತಿಪ್ಪೇಶ್, ವಿನೋದ್‌ಕುಮಾರ್, ಎಚ್.ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net