ಅಕ್ರಮ ಮದ್ಯ ಮಾರಾಟ ವಿರೋಧಿಸಿ ಪ್ರತಿಭಟನೆ

CTD 13 Iyyanahalli--0004
Published on

ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಹೋಬಳಿಯ ಐಯ್ಯನಹಳ್ಳಿ ಕುರುಬರಹಟ್ಟಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಹಟ್ಟಿಯಲ್ಲಿ ಕುಡುಕರ ಹಾವಳಿ ಹೆಚ್ಚಾಗುತ್ತಿದ್ದು, ಅದಕ್ಕೆ ಸಂಪೂರ್ಣ ಕಡಿವಾಣ ಹಾಕಲು ಮುಂದಾಗಬೇಕು ಎಂದು ಜಿಲ್ಲಾಡಳಿತ ಮತ್ತು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು.

ರಾಜಾರೋಷವಾಗಿ ಅಂಗಡಿ ಮತ್ತು ಮನೆಗಳಲ್ಲೇ ಅಕ್ರಮ ಮದ್ಯ ಮಾರುತ್ತಿದ್ದು, ಮದ್ಯ ವ್ಯಸನಿಗಳ ಸಂಖ್ಯೆ ದಿನೇ ದಿನೆ ಅಧಿಕವಾಗುತ್ತಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿ ಎಸೆದು ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೂಲಿ ಮಾಡಿ ದುಡಿದ ಹಣದಲ್ಲಿ ಮದ್ಯ ಸೇವಿಸಿ ಬರುವ ಪುರುಷರಿಂದಾಗಿ ಗ್ರಾಮದಲ್ಲಿ ಅಶಾಂತಿ ಉಂಟಾಗುತ್ತಿದೆ. ಇದರಿಂದಾಗಿ ಬಡ ಕುಟುಂಬಗಳ ಜೀವನ ನಿರ್ವಹಣೆಯೂ ಕಷ್ಟಕರವಾಗುತ್ತಿದೆ. ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಅಧಿಕಾರಿಗಳು ಈ ಕುರಿತು ಗಮನಹರಿಸಿ ಗ್ರಾಮವನ್ನು ಮದ್ಯಮುಕ್ತವಾಗಿಸಬೇಕು ಎಂದು ಕೋರಿದರು.

ಗ್ರಾಪಂ ಸದಸ್ಯರಾದ ಶಂಕರಮ್ಮ, ಜಯಣ್ಣ, ಶಿವಾನಂದಪ್ಪ, ಗ್ರಾಮಸ್ಥರಾದ ಲೋಲಮ್ಮ, ಶಂಕರಮ್ಮ, ಶಿವಮ್ಮ, ರತ್ನಮ್ಮ, ಗುತ್ಯಮ್ಮ, ಬಿ. ರುದ್ರಮ್ಮ, ಟಿ.ಜಗದೀಶ, ನಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net