ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಆಡಳಿತ ವಿಫಲ

04-06jvg01
ಜೇವರ್ಗಿ, ಯಡ್ರಾಮಿ ತಾಲೂಕಿನ ಪ್ರತಿ ಹಳ್ಳಿಯ ಕಿರಾಣಿ, ಪಾನ್‌ಶಾಪ್, ಧಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ತಡೆಯುವಲ್ಲಿ ಅಬಕಾರಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ನಮ್ಮ ಕರ್ನಾಟಕ ರಕ್ಷಣಾ ಸೇನೆ ನೇತೃತ್ವದಲ್ಲಿ ಮಹಿಳೆಯರು ಜೇವರ್ಗಿಯ ಅಬಕಾರಿ ಕಚೇರಿಗೆ ಬೀಗ ಹಾಕಿ, ಪೊರಕೆ ಹಿಡಿದು ಪ್ರತಿಭಟನೆ ನಡೆಸಿದರು.
Published on

ಜೇವರ್ಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದ್ದು, ತಡೆಯುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿ ನಮ್ಮ ಕರ್ನಾಟಕ ರಕ್ಷಣಾ ಸೇನೆ ನೇತೃತ್ವದಲ್ಲಿ ಮಹಿಳೆಯರು ಅಬಕಾರಿ ಕಚೇರಿಗೆ ಬೀಗ ಹಾಕಿ ಕೈಯಲ್ಲಿ ಪೊರಕೆ ಹಿಡಿದು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಪ್ರತಿ ಹಳ್ಳಿಯ ಕಿರಾಣಿ ಅಂಗಡಿ, ಧಾಬಾ, ಪಾನ್‌ಶಾಪ್ ಮತ್ತು ಮನೆಗಳಲ್ಲಿ ಭಯವಿಲ್ಲದೆ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಆದರೆ ಅಬಕಾರಿ ಅಧಿಕಾರಿಗಳು ಮಾತ್ರ ತಮಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ ಎಂದು ಕಿಡಿಕಾರಿದರು.

ಕೂಡಲೇ ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಬೇಕು. ಮದ್ಯದ ಅಂಗಡಿಗಳಲ್ಲಿ ನಿಗದಿ ಪಡಿಸಿದ ದರದಲ್ಲಿ ಮದ್ಯ ಮಾರಾಟ ಮಾಡಬೇಕು. ಅಕ್ರಮವಾಗಿ ಮದ್ಯ ಮಾರಿದರೆ ಅಂಗಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಸುದೀಂದ್ರ ಇಜೇರಿ, ತಾಲೂಕು ಅಧ್ಯಕ್ಷ ಶಿವಲಿಂಗ ಹಳ್ಳಿ, ಪ್ರಮುಖರಾದ ಭೀಮಣ್ಣ ಶಖಾಪುರ, ಶಿವಕಾಂತಮ್ಮ, ಜಗದೇವಿ, ಶಾಂತಾಬಾಯಿ, ಪಾರ್ವತಿ ಕಲ್ಯಾಣಿ, ಸಾವಿತ್ರಿ ಗೊಲ್ಲಾಳಪ್ಪ, ಮಾಂತಮ್ಮ ಗುರುಲಿಂಗಪ್ಪ, ಇಂದ್ರಾಬಾಯಿ, ರೇಣುಕಾ, ತಾಯಮ್ಮ, ಶರಣಮ್ಮ, ಯಲ್ಲಮ್ಮ ನಿಂಗಪ್ಪ, ಗಂಗುಬಾಯಿ, ಭಾಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net