

ಚಿತ್ರದುರ್ಗ: ಜಿಲ್ಲೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯ ಹೆಚ್ಚಿರುವ ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿ ಕಂಡುಬರುತ್ತಿದ್ದು, ತಡೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಕೆಲ ಪೆಟ್ಟಿಗೆ ಹಾಗೂ ತರಕಾರಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಖೇಧಕರ. ಕೂಡಲೇ ಹೆಚ್ಚಿನ ದಾಳಿ ನಡೆಸಿ, ಅಕ್ರಮ ಮದ್ಯ ಮಾರಾಟಗಾರರ ಹೆಡೆಮುರಿ ಕಟ್ಟಬೇಕು ಎಂದು ತಾಕೀತು ಮಾಡಿದ್ದಾರೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳೂ ಇಂತಹ ಸ್ಥಳಗಳಲ್ಲಿ ಮದ್ಯ ಖರೀದಿಸಿ ಸೇವಿಸಿರುವ ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ. ಕೂಡಲೇ ಕಡಿವಾಣ ಹಾಕಿ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್ವರೆಗೂ ಅಬಕಾರಿ ಇಲಾಖೆಯಿಂದ 1,313 ದಾಳಿ ನಡೆಸಲಾಗಿದೆ. ಅಬಕಾರಿ ಕಾಯ್ದೆಯಡಿ ಘೋರ ಪ್ರಕರಣ ದಾಖಲಿಸಲಾಗಿದೆ. 1,570 ಲೀಟರ್ ಮದ್ಯ, 210 ಲೀಟರ್ ಬಿಯರ್ ಹಾಗೂ ಮದ್ಯ ಸಾಗಾಣಿಕೆಗೆ ಬಳಸಲಾದ 39 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಕಾರ್ಮಿಕ ಇಲಾಖೆಯಿಂದ ಜಿಲ್ಲಾದ್ಯಂತ 208 ಬಾರಿ ತಪಾಸಣೆ ನಡೆದಿದ್ದು, ಈ ಪೈಕಿ 5 ಸ್ಥಳಗಳಲ್ಲಿ ಒಟ್ಟು 6 ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ ಎಂದು ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್‌ಕುಮಾರ್ ಮಾಹಿತಿ ನೀಡಿದರು.