

ಹನೂರು: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಆಗ್ರಹಿಸಿ ತಾಲೂಕಿನ ಅರೆಕಡುವಿನ ದೊಡ್ಡಿಯ ಮಹಿಳೆಯರು ಗುರುವಾರ ಪಟ್ಟಣದ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಸುಮಾರು 75ಕ್ಕೂ ಹೆಚ್ಚು ಗಿರಿಜನ ಕುಟುಂಬಗಳು ವಾಸಿಸುತ್ತಿದ್ದು, ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ, ಮೂರ‌್ನಾಲ್ಕು ವರ್ಷದಿಂದ ಗ್ರಾಮದಲ್ಲಿ ಮೂವರು ವ್ಯಕ್ತಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ನೆಮ್ಮದಿಯ ವಾತಾವರಣ ಇಲ್ಲದಂತಾಗಿದ್ದು, ನಿತ್ಯ ಕುಟುಂಬದಲ್ಲಿ ಗಲಾಟೆಗೆ ಕಾರಣವಾಗಿದೆ. ಕೆಲವರು ಕೂಲಿ ಹಣವನ್ನೆಲ್ಲ ಕುಡಿತಕ್ಕಾಗಿ ವ್ಯಯಿಸುತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಮಹಿಳೆಯರು ದೂರಿದರು.
ಗ್ರಾಮದಲ್ಲೇ ಮದ್ಯ ಸಿಗುತ್ತಿರುವುದರಿಂದ ಕೆಲ ಯುವಕರು ಮದ್ಯಕ್ಕೆ ದಾಸರಾಗುತ್ತಿದ್ದಾರೆ. ಪರಿಣಾಮ ಗ್ರಾಮದಲ್ಲಿ ಅಶಾಂತಿ ನಿರ್ಮಾಣವಾಗಿದೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ತುಂಬ ತೊಂದರೆ ಅನುಭವಿಸುತ್ತಿದ್ದೇವೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.
ಎಎಸ್‌ಐ ರವಿಕುಮಾರ್ ಮನವಿ ಸ್ವೀಕರಿಸಿ ಮಾತನಾಡಿ, ಈ ಬಗ್ಗೆ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ಅವರ ಗಮನಕ್ಕೆ ತಂದು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗುವುದು. ಆದಾಗ್ಯೂ ಮದ್ಯ ಮಾರಾಟ ಮುಂದುವರಿಸಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಮದ ಭದ್ರಮ್ಮ, ಚಂದ್ರಮ್ಮ, ದಾಸಮ್ಮ, ಕೆಂಪಮ್ಮ, ಹಾಲಮಣಿ, ಮಾದಮ್ಮ, ಬೊಮ್ಮಮ್ಮ, ಬಸಮ್ಮ, ರಂಗಮ್ಮ, ತಾಯಮ್ಮ, ದುಂಡಮ್ಮ, ಶಿವಮ್ಮ, ಸಿದ್ದಮ್ಮ ಸೇರಿದಂತೆ 25ಕ್ಕೂ ಹೆಚ್ಚು ಮಹಿಳೆಯರಿದ್ದರು.