

ಹಾಸನ : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆರು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಆರು ಮಂದಿ ಆರೋಪಿಗಳ ಸಮೇತ 21,578 ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಅರಕಲಗೂಡು ತಾಲೂಕು ಕಸಬಾ ಹೋಬಳಿ ಬೋರನಹಳ್ಳಿ ಗ್ರಾಮದ ಬೋರೇಗೌಡ (58) ಅವರ ತಮ್ಮ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಿ ಅವರಿಂದ 1,686 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡು ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೊಳೆನರಸೀಪುರ ತಾಲೂಕು ಹಳೆಕೋಟೆ ಹೋಬಳಿಯ ತವನಂದಿ ಗ್ರಾಮದ ದೇವರಾಜು ಅವರ ಮನೆ ಮೇಲೆ ದಾಳಿ ಮಾಡಿ ಸುಮಾರು 4,040 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡು ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೊಳೆನರಸೀಪುರ ತಾಲೂಕು ಕಸಬಾ ಹೋಬಳಿ ಮುಂಡನಹಳ್ಳಿ ಗ್ರಾಮದ ಚನ್ನಕೇಶವ ಎಂಬಾತ ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿ ಆರೋಪಿಯಿಂದ 1,053 ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಹಾಸನ ಗ್ರಾಮಾಂತರ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ಡಿ.ಸಿ.ಮಂಜು ಅವರು ಗಸ್ತು ಕರ್ತವ್ಯದಲ್ಲಿದ್ದ ವೇಳೆ ಹಾಸನ ತಾಲೂಕು ಹಳೇಬೀಡು ರಸ್ತೆಯ ಸಾಲಗಾಮೆ ಗ್ರಾಮದ ಸಂಪಿಗೆಮ್ಮ ಹೋಟೆಲ್ ಮುಂಬಾಗ ಮದ್ಯ ಮಾರಾಟ ಮಾಡುತ್ತಿದ್ದ ರಾಮಕೃಷ್ಣೇಗೌಡ ಎಂಬಾತನನ್ನು ವಶಕ್ಕೆ ಪಡೆದು ಸುಮಾರು 2,229 ರೂ. ಬೆಲೆ ಬಾಳುವ ಮದ್ಯವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಬೇಲೂರು ತಾಲೂಕು ಬಿಕ್ಕೋಡು ಹೋಬಳಿ ಡಣಕಾಯನಹಳ್ಳಿ ಗ್ರಾಮದ ಕಲ್ಯಾಣ ಕುಮಾರ್ ಚಿಲ್ಲರೆ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ 5,342 ರೂ. ಬೆಲೆಬಾಳುವ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳ ಹೋಬಳಿ, ರಾಜೇನಹಳ್ಳಿ ಗೇಟ್ ಹತ್ತಿರ ಟೀ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಸ್ವಾಮಿ ಎಂಬಾತನನ್ನು ಬಂಧಿಸಿ 7,228 ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.