

ಚಿಕ್ಕಮಗಳೂರು: ಕಡೂರು ತಾಲೂಕು ಮದಗದ ಕೆರೆಯ ಮಣ್ಣಿನ ಅಕ್ರಮ ಮಾರಾಟವನ್ನು ತಡೆಗಟ್ಟುವಂತೆ ಒತ್ತಾಯಿಸಿ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಕಾರ್ಯಕರ್ತರು ಮಂಗಳವಾರ ಎಡಿಸಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ಸೋಮು ನಾಯಕ್, ರೈತರೆಂದು ಹೇಳಿಕೊಳ್ಳುವ ಹಲವರು ಮದಗದ ಕೆರೆಯ ಪಾತ್ರದ ಭೂಮಿಯನ್ನು ಬಗೆದು ಮಣ್ಣನ್ನು ಟ್ರಾö್ಯಕ್ಟರ್ ಮತ್ತು ಲಾರಿಗಳಲ್ಲಿ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ. ಈ ದಂದೆ ಹಗಲು, ರಾತ್ರಿ ಎನ್ನದೇ ಹಲವಾರು ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ದೂರಿದರು.
ಭೂಮಿಯನ್ನು ಬಗೆದು ಮಣ್ಣನ್ನು ಸಾಗಿಸುತ್ತಿರುವುದರಿಂದಾಗಿ ಮದಗದ ಕೆರೆಯ ಪಾತ್ರದಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿದ್ದು, ಅದರಲ್ಲಿ ಮಕ್ಕಳು, ಜನ, ಜಾನುವಾರುಗಳು ಬಿದ್ದು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಅಕ್ರಮ ಮಣ್ಣುಗಾರಿಕೆಯಿಂದಾಗಿ ಕೆರೆಯ ಪಾತ್ರ ಬರಿದಾಗುತ್ತಿದೆ, ಯಾವುದೇ ಪರವಾನಗಿ ಅಥವಾ ಅನುಮತಿ ಇಲ್ಲದೇ ಕೆರೆಯ ಭೂಮಿಯನ್ನು ಬಗೆದು ಮಣ್ಣನ್ನು ಮಾರಾಟ ಮಾಡಲಾಗುತ್ತಿದೆ. ಮಳೆಗಾಲದ ವೇಳೆ ಅನಾಹುತಗಳು ಸಂಭವಿಸುವ ಮುನ್ನ ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಮಣ್ಣಿನ ಅಕ್ರಮ ಮಾರಾಟವನ್ನು ತಕ್ಷಣ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಅಕ್ರಮ ಮಣ್ಣುಗಾರಿಕೆ ವಿರುದ್ಧ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಕುಮಾರ್, ಕಾರ್ಯದರ್ಶಿ ಪಿ.ಲೋಕೇಶ್, ನಿರ್ದೇಶಕ ಶಿವಕುಮಾರ್, ತಾಲೂಕು ಉಪಾಧ್ಯಕ್ಷ ರೂಪೇಶ್ ಉಪಸ್ಥಿತರಿದ್ದರು.