ಹಾಸನ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಳ್ಳಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 20 ಚೀಲಕ್ಕೂ ಹೆಚ್ಚು ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ನಗರದ 80 ಅಡಿ ರಿಂಗ್ ರಸ್ತೆಯಲ್ಲಿ ಬಡವರಿಗೆ ಸೇರ ಬೇಕಿದ್ದ ಅಕ್ಕಿಯನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೆನ್ಷನ್ ಮೊಹಲ್ಲಾ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದರು.ಖದೀಮರು ಸಿಕ್ಕಿ ಬಿದ್ದ ನಂತರ ಪರಿಶೀಲನೆ ನಡೆಸಿದ ವೇಳೆ ಸರ್ಕಾರಿ ಗೋದಾಮಿನಿಂದ ಅಕ್ಕಿಯನ್ನು ಕದ್ದು ಹಾಳು ಮನೆಯೊಂದಕ್ಕೆ ಸಾಗಾಟ ಸಂಗ್ರಹ ಮಾಡಲಾಗುತ್ತಿತ್ತು ಎಂಬುದು ತಿಳಿದು ಬಂದಿದೆ.
ಕೆಎ-13-ಡಿ-2096 ನಂಬರಿನ ಮಹಿಂದ್ರಾ ಪಿಕ್‌ಅಪ್ ವಾಹನದಲ್ಲಿ ಅಕ್ಕಿ ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಅದಕ್ಕೂ ಮುನ್ನ ಪ್ರತಿನಿತ್ಯ ಕೆಎಸ್‌ಎಫ್‌ಸಿ ಗೋಡೌನ್‌ನಿಂದ ಅಕ್ಕಿ ಕದಿಯುತ್ತಿದ್ದ ಖದೀಮರು, ತಿಂಗಳಿಗೆ ನೂರಾರು ಚೀಲ ಪಡಿತರ ಅಕ್ಕಿಗೆ ಕನ್ನ ಹಾಕುತ್ತಿದ್ದರು. ಈ ಅಕ್ರಮ ಕಳೆದ ಹಲವು ದಿನಗಳಿಂದ ನಡೆಯುತ್ತಲೇ ಇತ್ತು. ಮತ್ತೊಂದು ಕಳವಳಕಾರಿ ಸಂಗತಿ ಎಂದರೆ ಅಕ್ಕಿ ಕಳ್ಳತನಕ್ಕೆ ಸಂಬಂಧಪಟ್ಟ ಕೆಲ ಅಧಿಕಾರಿಗಳೇ ಸಹಕಾರ ನೀಡುತ್ತಿದ್ದರು ಎನ್ನಲಾಗಿದೆ.
ಈ ಕಾರಣದಿಂದಲೇ ಕಳ್ಳರು ಅಕ್ಕಿ ಕದಿಯುವ ಕೃತ್ಯ ತಿಳಿದಿದ್ದರೂ, ಏನೂ ಕಾಣದಂತೆ ಸುಮ್ಮನಿದ್ದರು. ಕಡೆಗೂ ಅಕ್ರಮ ಬಯಲಾಗಿದ್ದು, ಬಡವರ ಪಾಲಿನ ಅಕ್ಕಿ ಕಾಳಸಂತೆಯಲ್ಲಿ ಎಗ್ಗಿಲ್ಲದಂತೆ ಮಾರಾಟ ಆಗುತ್ತಿದೆ ಎಂಬುದನ್ನು ಇದು ಸಾಕ್ಷೀಕರಿಸಿದೆ. ಇದಕ್ಕೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು, ಬಡವರ ಅನ್ನಕ್ಕೆ ಕನ್ನ ಹಾಕುವ ಅಕ್ರಮ ನಿಲ್ಲುವುದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.