ಅಕ್ರಮ ಪಂಪ್‌ಸೆಟ್ ತೆರವುಗೊಳಿಸಲಿ

8SHIRASANGI1
Published on

ಶಿರಸಂಗಿ: ಅಕ್ರಮ ಪಂಪ್‌ಸೆಟ್ ತೆರವು ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ರೈತರು ಗ್ರಾಮದ ಲಿಂಗರಾಜ ಸರ್ಕಲ್‌ನಲ್ಲಿ ಶನಿವಾರ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.

ಸವದತ್ತಿ ಜಾಕ್‌ವೆಲ್‌ನಿಂದ ಸಾಗುವ ಬಲದಂಡೆ ಕಾಲುವೆ ನೀರು ಶಿರಸಂಗಿ ಗ್ರಾಮಕ್ಕೆ ತಲುಪುವುದಕ್ಕಿಂತ ಮುಂಚಿನ ಗ್ರಾಮಗಳಲ್ಲಿ ಅಕ್ರಮವಾಗಿ 3-4 ಸಾವಿರ ಪಂಪಸೆಟ್ ಅಳವಡಿಕೆಯಾಗಿವೆ. ಹೀಗಾಗಿ, ಮುಂದಿನ ಗ್ರಾಮಗಳ ಸುಮಾರು 5 ಸಾವಿರ ಎಕರೆ ಬಿತ್ತನೆಗೊಂಡ ಬೆಳೆ ನೀರಿನ ಕೊರತೆಯಿಂದ ಸಂಪೂರ್ಣ ನೆಲಕಚ್ಚುವ ಹಂತಕ್ಕೆ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಕಾಲಕ್ಕೆ ಉಪ ಕಾಲುವೆಗಳ ದುರಸ್ತಿ ಕೈಗೊಳ್ಳದ ಪರಿಣಾಮ ಸಾಕಷ್ಟು ನೀರು ಪೋಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಸವದತ್ತಿ ಮಲಪ್ರಭಾ ಬಲದಂಡೆ ಕಾಲುವೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಬಿ.ಮುಶೇಖಾನ ರೈತರ ಸಮಸ್ಯೆ ಆಲಿಸಿ ಶೀಘ್ರದಲ್ಲೇ ಉಪಕಾಲುವೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಅಕ್ರಮ ಪಂಪ್‌ಸೆಟ್ ತೆರುವುಗೊಳಿಸುವ ಜತೆಗೆ ಕಾಲುವೆಗೆ ಸಮರ್ಪಕ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಹಿಂಪಡೆದರು.

ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಪಂಚೇನವರ, ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಕಪಲನ್ನವರ, ವಿ.ಜಿ.ಮೇಟಿ, ಬಸಪ್ಪ ಕಣವಿ, ಮೌನೇಶ ಮೂಖಿ, ಸಂಭಾಜಿ ಶಿಂಧೆ, ಗಂಗಪ್ಪ ಪಂಚೇನವರ, ಸುರೇಶ ಬೇವೂರ, ಅರ್ಜುನ ಬಡೆಮ್ಮನವರ, ಸಿದ್ಧಪ್ಪ ಪೂಜೇರ, ಬಸವರಾಜ ರಾಮಬಾಳಪ್ಪನವರ, ಶಿದ್ಧನಗೌಡ ಶೆಟ್ಟನಗೌಡ್ರ, ಮಲ್ಲಿಕಾರ್ಜುನ ಪೂಜಾರ, ನಾಗಪ್ಪ ಪಂಚೇನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net