

ಮೈಸೂರು: ನಾಲೆ, ನದಿ, ಜಲಾಶಯಗಳ ಮಾರ್ಗದಲ್ಲಿ ಕಾನೂನುಬಾಹಿರವಾಗಿ ನೀರಿನ ಕೊಳವೆ ಹಾಕುವುದನ್ನು ತಡೆಯಲು ಜಲಸಂಪನ್ಮೂಲ ಇಲಾಖೆ ರೂಪಿಸಿರುವ ನಿಯಮಗಳು ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿವೆ. ಅಧಿಕಾರಿಗಳು ಈ ಅಧಿಕಾರವನ್ನು ಬಳಸಿಕೊಂಡು ಅಕ್ರಮ ನಿಯಂತ್ರಿಸಬೇಕು ಎಂದು ಉಪಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ವಿಶ್ವನಾಥ್‌ರೆಡ್ಡಿ ಹೇಳಿದರು.
ಜಲ ಸಂಪನ್ಮೂಲ ಇಲಾಖೆಯಿಂದ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಕರ್ನಾಟಕ ನೀರಾವರಿ(ತಿದ್ದುಪಡಿ) ಅಧಿನಿಯಮ-2024 ಕುರಿತು ಸೋಮವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ನೀರಾವರಿ ಅಧಿನಿಯಮ 1965ಕ್ಕೆ ತಿದ್ದುಪಡಿ ತಂದು ರಾಜ್ಯಪಾಲರಿಂದ ಅನುಮೋದನೆಗೊಂಡಿದೆ. ಇನ್ನೆರಡು ವಾರದಲ್ಲಿ ಇದು ಜಾರಿಗೆ ಬರಲಿವೆ. ಇದರಿಂದಾಗಿ ಅನೇಕ ಅಕ್ರಮವನ್ನು ತಡೆಯಬಹುದು. ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಅವಕಾಶವಿದೆ ಎಂದು ತಿಳಿಸಿದರು.
ನೂತನ ಕಾನೂನಿನ ಪ್ರಕಾರ ನೀರು ಬಳಕೆದಾರರು ನಾಲೆಯ ಮಧ್ಯ ಭಾಗದಿಂದ 5-6 ಮೀಟರ್‌ವರೆಗೆ ಒಳಗೆ ಬಾವಿಯನ್ನು ಕೊರೆಯಲು, ಕೃತಕ ಕೊಳ, ಯಾವುದೇ ರೀತಿಯ ನೀರಿನ ಸಂಗ್ರಹ ರಚಿಸಲು ಅನುಮತಿ ಪಡೆಯಬೇಕಿದೆ.
ಅನುಮತಿಗಾಗಿ ನೀರಾವರಿ ಇಲಾಖೆಗೆ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆಯಬೇಕಿದೆ. ನಾಲೆ ಮತ್ತು ಕೊಳವೆ ಹಾನಿ ಉಂಟು ಮಾಡಿದರೆ 2 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದರು.
ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಆರ್.ಎಲ್. ವೆಂಕಟೇಶ್ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲು ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಈ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.
ಕರ್ನಾಟಕ ನೀರಾವರಿ ಅಧಿನಿಯಮ-2024 ಮುನ್ನುಡಿ ಮತ್ತು ಅವಲೋಕನ ಕುರಿತು ಉಪಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರ ಕೆ.ಜೈಪ್ರಕಾಶ್, ಅಧಿನಿಯಮದ ಮುಖ್ಯಾಂಶಗಳು ಕುರಿತು ನೀರಾವರಿ ನಿಗಮದ ಕಾರ್ಯದರ್ಶಿ ಎಂ.ಎಸ್.ಗಿರೀಶ್, ಅರೆ ನ್ಯಾಯಾಂಗ ಕಾರ್ಯವಿಧಾನ ಕುರಿತು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸುನೀಲ್ ಹೆಗಡೆ ವಿಷಯ ಮಂಡಿಸಿದರು.
ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಬಿ.ಎನ್.ಫಣಿರಾಜ್, ಜಲ ಸಂಪನ್ಮೂಲ ಇಲಾಖೆ ಜಂಟಿ ಕಾರ್ಯದರ್ಶಿ ಸುಜಾತಾ ಎಲ್. ಜಾಧವ್, ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ನಿರ್ದೇಶಕ ಕೆ.ಜಿ.ಮಹೇಶ್, ಹೇಮಾವತಿ ಯೋಜನಾ ಇಂಜಿನಿಯರ್ ಜಿ.ಸಿ.ಮಂಜುನಾಥ್, ಸಣ್ಣ ನೀರಾವರಿ ಮತ್ತು ಅಂತರ್ಜಲ ವೃತ್ತ ಅಧೀಕ್ಷಕ ಇಂಜಿನಿಯರ್ ಪ್ರಶಾಂತ್ ಬಿ.ಗಡದಾನಪ್ಪ ಗೋಳ್, ಕಾಡಾ ಆಡಳಿತಾಧಿಕಾರಿ ಶಿವ ಮಹದೇವಯ್ಯ ಇದ್ದರು.