ಅಕ್ರಮ ತಿಳಿಸಿದರೂ ಕೈಬಿಟ್ಟ ಅಧಿಕಾರಿಗಳು

MANIKANT RATHOD (1)
Published on

ಕಲಬುರಗಿ: ನಗರದ ನಂದೂರು ಕೈಗಾರಿಕಾ ಪ್ರದೇಶ ಖಾಸಗಿ ಉಗ್ರಾಣದಲ್ಲಿ ಸಂಗ್ರಹಿಸಿದ್ದ ಅಕ್ರಮ ಪಡಿತರ ಅಕ್ಕಿ, ಕ್ಷೀರ ಭಾಗ್ಯದ ಹಾಲಿನ ಪುಡಿಯನ್ನು ಬುಧವಾರ ರಾತ್ರಿ ಪತ್ತೆ ಮಾಡಿ, ಅಧಿಕಾರಿಗಳು, ಪೊಲೀಸರ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೆ ಅಕ್ರಮಕ್ಕೆ ಸಾಥ್ ನೀಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮದ ಕುರಿತು ಅರಿತ ನಮ್ಮ ಕಾರ್ಯಕರ್ತರು ತಡರಾತ್ರಿ ಗೋಡೌನ್ ಬಳಿ ತೆರಳಿ, ೧೧೨ಗೆ, ಕಂಟ್ರೋಲ್ ರೂಂ.ನವರಿಗೆ ಕರೆ ಮಾಡಿ ಮಾಹಿತಿ ನೀಡಿದರೂ ಪ್ರತಿಕ್ರಿಯಿಸಲಿಲ್ಲ. ತಡರಾತ್ರಿ ಪೊಲೀಸರು ಬಂದರೂ ಗೋದಾಮಿನ ಕೀಲಿ ತೆಗೆಸಿ, ನೋಡಲಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳು ಬರಲಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇಡೀ ರಾತ್ರಿ ಕಾದರೂ ಆಡಳಿತದಿಂದ ಸ್ಪಂದನೆ ದೊರೆಯಲಿಲ್ಲ. ಬೆಳಗ್ಗೆ ಆರು ಗಂಟೆಗೆ ಗೋದಾಮು ತೆರೆದಾಗ ಕ್ಷೀರ ಭಾಗ್ಯದ ಹಾಲಿನ ಪುಡಿಯ ನೂರಾರು ಪ್ಯಾಕೇಟ್, ನೂರಾರು ಕ್ವಿಂಟಲ್ ಪಡಿತರ ಅಕ್ಕಿ ಸಂಗ್ರಹ ಕಂಡು ಬಂದಿದೆ. ನಂತರ ಆಹಾರ ಇಲಾಖೆ ಅಧಿಕಾರಿಗಳೇ ಎದುರು ನಿಂತು ಅವುಗಳನ್ನು ಸಾಗಿಸಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಕಿಡಿ ಕಾರಿದರು.
ಅಕ್ಕಿಯ ಅಧಿಕಾರಿಗಳು ಟೆಂಡರ್ ಪ್ರತಿಯನ್ನು ಆಹಾರ ಇಲಾಖೆ ಅಧಿಕಾರಿಗಳು ನೀಡುತ್ತಿದ್ದಾರೆ. ಖಾಸಗಿ ಗೋದಾಮಿನಲ್ಲಿ ಸರ್ಕಾರಿ ಅಕ್ಕಿ ಮತ್ತು ಕ್ಷೀರ ಭಾಗ್ಯದ ಹಾಲಿನ ಪುಡಿ ಬಂದಿದ್ದು ಹೇಗೆ?. ಸಾಗಣೆ ಮಾಡಿದ ವಾಹನ ಯಾರದ್ದು? ಅದರ ಪಾವತಿ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಿಲ್ಲ. ಅಧಿಕಾರಿಗಳಿಂದ ದಾಖಲೆ ಪಡೆದು ಪೊಲೀಸ್ ಕಮಿಷನರ್‌ಗೆ ದೂರು ನೀಡಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net