

ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ 11 ಜನರ ಬಂಧನ
ಬೆಳಗಾವಿ : ನಗರದಲ್ಲಿ ನಡೆದ ಪ್ರತ್ಯೇಕ 6 ಪ್ರಕರಣಗಳಲ್ಲಿ ಅಕ್ರಮವಾಗಿ ಗಾಂಜಾ ಸಾಗಾಣಿಕೆ,ಸೇವನೆ ಮತ್ತು ಮಟಕಾ ದಂಧೆಯಲ್ಲಿ ತೊಡಗಿದ್ದ ಒಟ್ಟು 11 ಜನ ಆರೋಪಿತರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಬಾಗೇವಾಡಿ ಪೊಲೀಸ್ ಠಾಣೆಯ ಶರಣಮಟ್ಟಿ ಕ್ರಾಸ್ ಬಳಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಬೈಲಹೊಂಗಲ ಶಿಗೇಹಳ್ಳಿ ಗ್ರಾಮದ ನಿವಾಸಿ ಮಂಜುನಾಥ ಕುರೇರನನ್ನು ವಶಕ್ಕೆ ಪಡೆದು ಆತನಿಂದ 2,066 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಯಾಂಪ್ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿತರಾದ ರಾಜು ಪರಶುರಾಮ ಉಚಗಾಂವಕರ,ಹನುಮಂತ ಪರಶುರಾಮ ಪಾಟೀಲ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ 1066 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಇನ್ನೊಂದು ದಾಳಿಯಲ್ಲಿ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿ ಜಾಫರ ಹುಸೇನಸಾಬ ಸೊಲ್ಲಾಪುರೆ,ಮುಸ್ತಾಕ ಹಜರತಬಾಯಿ ಮಕಾಂದರ ಬಂಧಿತರಾಗಿದ್ದಾರೆ.
ಮಟಕಾ ಅಡ್ಡೆ ಮೇಲೆ ದಾಳಿ
ನಗರದ ಖಂಜಾರ ಗಲ್ಲಿಯಲ್ಲಿ ಮಟಕಾ ಅಂಕಿ ಆಟದಲ್ಲಿ ತೊಡಗಿದ್ದ ಮೊಹ್ಮದಶಪಿ ಮೋದಿನಸಾಬ್ ತಹಶಿಲ್ದಾರ,ಪರುಶುರಾಮ ಅಪ್ಪಾಜಿ ಹೊಸಕೋಟಿ,ಪ್ರಕಾಶ ತುಕಾರಾಮ ಪಾಟೀಲ,ರಫಿಕ ಹುಸೇನಸಾಬ್ ಮುಲ್ಲಾ,ಅಮ್ಮಾದಖಾನ ಪಠಾಣ ಆರೋಪಿತರಾಗಿದ್ದಾರೆ.ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನೊಂದು ದಾಳಿಯಲ್ಲಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ಬಳಿ ಮಟಕಾ ದಂಧೆಯಲ್ಲಿ ತೊಡಗಿದ್ದ ರಾಜು ಯಲ್ಲಪ್ಪ ನಾಯಿಕ ಎಂಬಾತನನ್ನು ಬಂಧಿಸಲಾಗಿದೆ.