ಸಕಲೇಶಪುರ: ಅಕ್ರಮವಾಗಿ ಗೋವು ಕಡಿದು ಗೋಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳು ಮತ್ತು ಅವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಭಜರಂಗದಳ ಕಾರ್ಯಕರ್ತರನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕು ಕಣಿಗಲು ಮನೆ ಸಮೀಪ ಹೇಮಾವತಿ ಹೊಳೆದಂಡೆಯ ಅರಣ್ಯ ಪ್ರದೇಶದಲ್ಲಿ ಕಳೆದ ಅ.26 ರಂದು ಬೆಳಗ್ಗೆ ಬೇಲೂರು ತಾಲೂಕು ಹಾಲೆಬೇಲೂರು ಗ್ರಾಮದ ಚಂದ್ರ ಅಲಿಯಾಸ್ ಕುಳ್ಳ ಮತ್ತು ಲೋಕೇಶ ಎಂಬಿಬ್ಬರು ಆರೋಪಿಗಳು ಅಕ್ರಮವಾಗಿ ಗೋವು ಕಡಿದು ಗೋಮಾಂಸ ಮಾರಾಟ ಮಾಡುತ್ತಿದ್ದರು. ವಿಷಯ ತಿಳಿದ ಭಜರಂಗದಳ ಕಾರ್ಯಕರ್ತರಾದ ರವಿ ಅಲಿಯಾಸ್ ಚಾರ್ಲಿ, ಶಿವು ಅಲಿಯಾಸ್ ಜಿಪ್ಪಿ, ಶ್ರೀಜಿತ್ ಗೌಡ ಮತ್ತು ರವಿ ಎಂಬುವರು ದಾಳಿ ನಡೆಸಿ ಗೋಮಾಂಸ ಮಾರಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದರು.
ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರ ಅಲಿಯಾಸ್ ಕುಳ್ಳ ಮತ್ತು ಲೋಕೇಶ ಎಂಬಿಬ್ಬರು ಆರೋಪಿಗಳನ್ನು ಹಾಗೂ ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗದಳ ಕಾರ್ಯಕರ್ತರಾದ ರವಿ ಅಲಿಯಾಸ್ ಚಾರ್ಲಿ, ಶಿವು ಅಲಿಯಾಸ್ ಜಿಪ್ಪಿ, ಶ್ರೀಜಿತ್ ಗೌಡ ಮತ್ತು ರವಿ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.