

ಗಜೇಂದ್ರಗಡ: ಅಕ್ರಮವಾಗಿ ಗೋವುಗಳ ಹತ್ಯೆ, ಕಳ್ಳತನ, ಸಾಗಣೆ ಮತ್ತು ಜಿಲ್ಲೆಯ ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳದಿಂದ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ವಿಶ್ವ ಹಿಂದು ಪರಿಷತ್, ಬಜರಂಗದಳ ತಾಲೂಕು ಕಾರ್ಯದರ್ಶಿ ಸಂಜೀವ ಜೋಶಿ ಮಾತನಾಡಿ, ಅಕ್ರಮ ಗೋವು ಸಾಗಣೆಯನ್ನು ಪೊಲೀಸರು ತಡೆಯುತ್ತಿಲ್ಲ. ಹೀಗಾಗಿ ಯುವಕರೇ ಅಕ್ರಮ ತಡೆಗೆ ಮುಂದಾಗಿದ್ದಾರೆ. ಗೋವುಗಳ ಸಾಗಾಟ ಮತ್ತು ಹತ್ಯೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದರು. ತಹಸೀಲ್ದಾರ್ ಪರವಾಗಿ ಗ್ರಾಮ ಲೆಕ್ಕಾಧಿಕಾರಿ ಉಮೇಶ ಅರಲಿಗಿಡದ ಅವರ ಮೂಲಕ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು. ವಿನಾಯಕ ಜರತಾರಿ, ಮಹಾಂತೇಶ ಗಂಧದ, ಮಂಜುನಾಥ ಅಜಮೀರ, ಲಕ್ಷ್ಮೀಕಾಂತ ಕಲಾಲ, ಕುಬೇರ ಮಾಳೋತ್ತರ, ಮಂಜು ರಾಜೋಳಿ, ಭರತ ರಾಠೋಡ, ಅನುರಾಗ ಚಿನಿವಾಲರ, ಬಸವರಾಜ ಪಟ್ಟೇದ, ಅಭಿಷೇಕ ಸೂಗರಯ್ಯನಮಠ, ಇತರರಿದ್ದರು.